ಕ್ಷುಲ್ಲಕ ವಿಚಾರಕ್ಕೆ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಕೊಲೆ ದೃಶ್ಯವು ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊಲೆಯಾದವರನ್ನು ಕಾರ್‌ಸ್ಟ್ರೀಟ್‌ನ ಮಹಮ್ಮಾಯಿ ದೇವಸ್ಥಾನ ರಸ್ತೆಯಲ್ಲಿರುವ ವೀರ ವೆಂಕಟೇಶ್ ಎಂಬ ಅಪಾರ್ಟ್ ಮೆಂಟ್ ನಿವಾಸಿ ವಿನಾಯಕ ಕಾಮತ್ ಎಂದು ಗುರುತಿಸಲಾಗಿದೆ. ಇವರು ಕರಂಗಲ್ಪಾಡಿಯಲ್ಲಿರುವ ಟ್ರಾವೆಲ್ಸ್ ವೊಂದರಲ್ಲಿ ಮ್ಯಾನೇಜರ್ ಆಗಿದ್ದರು. ಇದೇ ಅಪಾರ್ಟ್ ಮೆಂಟ್‌ನಲ್ಲಿ ವಾಸವಿರುವ ಕೃಷ್ಣಾನಂದ ಕಿಣಿ ಹಾಗೂ ಆತನ ಪುತ್ರ ಅವಿನಾಶ್ ಕಿಣಿ ಕೊಲೆ ಆರೋಪಿಗಳಾಗಿದ್ದು, ಅವರನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿನಾಯಕ ಕಾಮತ್ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್‌ನ ಗೇಟಿನ ಎದುರು ರಸ್ತೆಯನ್ನು ಮನಪಾದ ವತಿಯಿಂದ ಇತ್ತೀಚೆಗೆ ಸಿಮೆಂಟ್ ಹಾಕಿ ಸರಿಪಡಿಸಲಾಗಿತ್ತು. ಇದರ ಮೇಲೆ ಬೇರೆಯವರ ಕಾರು ಚಲಾಯಿಸಿಕೊಂಡು ಹೋಗುವ ವಿಚಾರವಾಗಿ ವಿನಾಯಕ ಕಾಮತ್ ಜೊತೆ ಕೃಷ್ಣಾನಂದ ಕಿಣಿ ಹಾಗೂ ಆತನ ಪುತ್ರ ಅವಿನಾಶ್ ಕಿಣಿ ಕಳೆದ ನಾಲ್ಕು ದಿನಗಳಿಂದ ಜಗಳವಾಡುತ್ತಿದ್ದರೆನ್ನಲಾಗಿದೆ. ಕಳೆದ ಬುಧವಾರ ರಾತ್ರಿ ೧೧ರ ಸುಮಾರಿಗೆ ಅಪಾರ್ಟ್ ನ ಪಾರ್ಕಿಂಗ್ ಸ್ಥಳದಲ್ಲಿ ಇವರೊಳಗೆ ಜಗಳ ನಡೆದಿದ್ದು, ಈ ವೇಳೆ ವಿನಾಯಕ ಕಾಮತ್ ರಿಗೆ ಕೃಷ್ಣಾನಂದ ಚೂರಿಯಿಂದ ಇರಿದಿದ್ದಾನೆ ಎಂದು ವಿನಾಯಕ ಕಾಮತ್ ಅವರ ಪತ್ನಿ ಅಮಣಿ ಕಾಮತ್ ಬಂದರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಚೂರಿ ಇರಿತದಿಂದ ವಿನಾಯಕ ಕಾಮತ್ ಗೆ ತೀವ್ರ ರಕ್ತಸ್ರಾವ ಉಂಟಾಗಿದ್ದು, ತಕ್ಷಣ ಅಪಾರ್ಟ್‌ಮೆಂಟ್‌ನ ಇತರರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಂದರ್ ಪೊಲೀಸ್ ಠಾಣಾ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.