ಮುಂದಿನ ಆದೇಶದವರೆಗೆ ದ.ಕ. ಜಿಲ್ಲೆಯ ರಿಕ್ರಿಯೇಷನ್ ಕ್ಲಬ್ಗಳು ಬಂದ್: ಜಿಲ್ಲಾಧಿಕಾರಿ
ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗುತ್ತಲೇ ಇವೆ, ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ರಿಕ್ರಿಯೇಷನ್ ಕ್ಲಬ್ಗಳಲ್ಲಿ ಇಸ್ಪೀಟ್ ಕಾರ್ಡ್ ಆಟವಾಡುವ ವೇಳೆ, ಕಾರ್ಡ್ಗಳನ್ನು ಒಬ್ಬರು ಮತ್ತೊಬ್ಬರಿಗೆ ನೀಡುವ ಸಂದರ್ಭದಲ್ಲಿ ಕೊರೋನಾ ಸೋಂಕು ಸಾಂಕ್ರಾಮಿಕವಾಗಿ ಪಸರಿಸುವ ಸಾಧ್ಯತೆಗಳು ಹೆಚ್ಚಾಗಿರುವುದು ಗಮನಿಸಲಾಗಿದೆ.
ರಿಕ್ರಿಯೇಷನ್ ಕ್ಲಬ್ಗಳಲ್ಲಿ ಇಸ್ಪೀಟ್ ಆಡುವಾಗ ಕನಿಷ್ಟ ಒಂದು ಮೀಟರ್ ಸಾಮಾಜಿಕ ಅಂತರ ಸಾಧ್ಯತೆ ಇರುವುದಿಲ್ಲ, ಇಸ್ಪೀಟ್ ಕಾರ್ಡ್ಗಳಲ್ಲಿ ಆಡುವಾಗ ಒಬ್ಬರಿಂದ ಒಬ್ಬರಿಗೆ ಕಾರ್ಡುಗಳನ್ನು ಹಂಚುವ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ಇದ್ದಲ್ಲಿ ಅವರ ಮೂಲಕ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ, ಆಟದಲ್ಲಿ ಭಾಗವಹಿಸುವ ವ್ಯಕ್ತಿಗಳಲ್ಲಿ ಆಟದ ಕಡೆ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಅವರಲ್ಲಿ ಉದ್ವೇಗ, ಕೋಪ, ಆತಂಕಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ರಿಕ್ರಿಯೇಷನ್ ಕ್ಲಬ್ಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಸೋಂಕು ಹರಡುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ರಿಕ್ರಿಯೇಷನ್ ಕ್ಲಬ್ಗೆ ಯಾವುದೇ ರೀತಿಯ ಎಸ್.ಓ.ಪಿ. ಇಲ್ಲದಿರುವುದರಿಂದ ಸದಸ್ಯರನ್ನು ನಿಯಂತ್ರಣಕ್ಕೆ ಒಳಪಡಿಸಲು ಸಾಧ್ಯವಿಲ್ಲದಿರುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗಗಳು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಈ ರಿಕ್ರಿಯೇಷನ್ ಕ್ಲಬ್ಗಳಲ್ಲಿ ಇಸ್ಪೀಟ್ ಅಟಗಳ ಜೊತೆಗೆ ಇತರ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದು ಅತೀ ಅಗತ್ಯವಿರುತ್ತದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಯವರ ವರದಿಯಂತೆ ರಿಕ್ರಿಯೇಷನ್ ಕ್ಲಬ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಒಂದೆಡೆ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಅಂಶವನ್ನು ಗಮನಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಪರಿಸ್ಥಿತಿಯು ತಹಬಂದಿಗೆ ಬರುವವರೆಗೆ ರಿಕ್ರಿಯೇಷನ್ ಕ್ಲಬ್ಗಳ ಚಲಾವಣೆ, ಕ್ಲಬ್ಗಳಲ್ಲಿನ ಮನೋರಂಜನೆಯು ತೀರಾ ಜೀವನಾವಶ್ಯವಲ್ಲವೆಂಬುದನ್ನು ಕೂಡಾ ಮನಗಾಣಲಾಗಿದೆ. ಅಲ್ಲದೇ ಸರ್ಕಾರಿ ಆದೇಶದಲ್ಲಿ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇತರ ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕಫ್ರ್ಯೂ ಹಾಗೂ ವಾರಂತ್ರ್ಯ ಕಫ್ರ್ಯೂ ದಂತಹ ನಿಬರ್ಂಧಗಳನ್ನು ಹೇರಲಾಗಿರುತ್ತದೆ.
ಈ ಎಲ್ಲಾ ಕಾರಣಗಳು ಹಾಗೂ ಸರ್ಕಾರಿ ಆದೇಶ ಮತ್ತು ವರದಿಯನ್ನು ಗಣನೆಗೆ ತೆಗೆದುಕೊಂಡು, ಕೋವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರದ ಮಾನದಂಡಗಳನ್ನು ಪಾಲಿಸಲು ಅನುಕೂಲವಾಗುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಕಾರ್ಯಚರಿಸುತ್ತಿರುವ ಎಲ್ಲಾ ರಿಕ್ರಿಯೇಷನ್ ಕ್ಲಬ್ ಗಳನ್ನು ತಕ್ಷಣದಿಂದ ಅನ್ವಯಿಸುವಂತೆ ಮುಂದಿನ ಆದೇಶದವರೆಗೆ ಮುಚ್ಚುವಂತೆ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 26 (1) (2) (3), 30 (2), 33, 34 (ಸಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯವರು ಆದ ಡಾ. ರಾಜೇಂದ್ರ ಕೆ.ವಿ., ಅವರು ಆದೇಶ ಹೊರಡಿಸಿದ್ದಾರೆ. ಆದೇಶವನ್ನು ಪಾಲಿಸದೆ ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ರನ್ವಯ, ಐಪಿಸಿ 1860ರ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4, 5 ಮತ್ತು 10 ರಂತೆ ಹಾಗೂ ಇತರ ಕಾನೂನು ರೀತ್ಯಾ ಕ್ರಮ ಜರಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.