1ನೇ ತರಗತಿಯಿಂದ ಶಾಲೆ ಆರಂಭಿಸಿ: ಪ್ರಕಾಶ್ ಅಂಚನ್ ನಿಯೋಗದಿಂದ ಶಿಕ್ಷಣ ಸಚಿವರಿಗೆ ಮನವಿ
ಬಂಟ್ವಾಳ: ಶಾಸಕ ರಾಜೇಶ್ ನಾಕ್ ನೇತೃತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರಿದ್ದ ನಿಯೋಗ ಬುಧವಾರ ಬೆಂಗಳೂರಿನ ಕಚೇರಿಯಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಭೇಟಿ ಮಾಡಿತು.

ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಒಂದನೇ ತರಗತಿಯಿಂದಲೇ ಆರಂಭಿಸಬೇಕು ಎನ್ನುವ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು 9 ಮತ್ತು 10ನೇ ತರಗತಿಗಳು ಆರಂಭಗೊಂಡ ಬಳಿಕ ಎರಡು ದಿನದಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬಂದಿದೆ. ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸಬೇಕೆನ್ನುವ ಇಚ್ಛೆ ಸರಕಾರಕ್ಕೂ ಇದ್ದೂ ಈ ಬಗ್ಗೆ ಆ. 30 ರಂದು ಮುಖ್ಯಮಂತ್ರಿಯ ಉಪಸ್ಥಿತಿಯಲ್ಲಿ ಶಾಸಕರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ದಡ್ಡಲಕಾಡು ಸರಕಾರಿ ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಆದಷ್ಟು ಶೀಘ್ರ ದಡ್ಡಲಕಾಡು ಶಾಲೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ನರಿಕೊಂಬು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪ್ರಮುಖರಾದ ಸಂತೋಷ್ ರಾಯಿಬೆಟ್ಟು, ಸುರೇಶ್ ಕೋಟ್ಯಾನ್ ಹಾಜರಿದ್ದರು.


















