ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಗೆ ಗೋಲ್ಡ್ ಅವಾರ್ಡ್

ಉಡುಪಿ: ನಗರದ ಹೆಸರಾಂತ ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಕೀನ್ಯಾದ ಮಸೈಮಾರಾದಲ್ಲಿ ಸೆರೆಹಿಡಿದಿರುವ ಎರಡು ಚೀತಾಗಳು ತನ್ನ ಬೇಟೆಯನ್ನು ಬೆನ್ನು ಹತ್ತುವ “ಹಂಗರ್ ವರ್ಸಸ್ ಹೋಪ್” ಛಾಯಾಚಿತ್ರಕ್ಕೆ ಓರಾ ಡಿ ಫ್ರೇಮ್ ಸರ್ಕ್ಯುಟ್ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ವಿಭಾಗದಲ್ಲಿ ಕ್ಲಬ್ ಗೋಲ್ಡ್ ಅವಾರ್ಡ್ ಪಡೆದಿರುತ್ತಾರೆ.

ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿರುವ ಈ ಸ್ಪರ್ಧೆಯು ಪ್ರತಿಷ್ಟಿತ ಎಫ್. ಐ. ಎ. ಪಿ ಮಾನ್ಯತೆಯನ್ನು ಪಡೆದಿರುತ್ತದೆ. ಉಡುಪಿಯ ಪ್ರಸಿದ್ಧ ಉದ್ಯಮಿಯಾಗಿರುವ ಸುಭಾಶ್ ಕಾಮತ್ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕ ಫೋಕಸ್ ರಾಘು ಅವರಿಂದ ಛಾಯಾಗ್ರಹಣ ಕಲಿತು, ಉದ್ಯಮದ ಜೊತೆ ಜೊತೆಗೇ ಹವ್ಯಾಸವನ್ನು ಬೆಳೆಸುತ್ತಾ ಈ ಸಾಧನೆ ಮಾಡಿದ್ದಾರೆ.
ವನ್ಯಜೀವಿ ಛಾಯಾಗ್ರಹಣವು ನೈಸರ್ಗಿಕ ಆವಾಸಸ್ಥಾನಗಳಲ್ಲಿ ವನ್ಯ ಜೀವಿಗಳ ಛಾಯಾಚಿತ್ರ ವನ್ನು ಸೆರೆಹಿಡಿಯುವ ಛಾಯಾಗ್ರಹಣದ ಒಂದು ಪ್ರಸಿದ್ಧ ವಿಭಾಗ. ಇದು ಅದೆಷ್ಟು ಆಸಕ್ತಿದಾಯಕ ಕಲೆಯೋ ಅಷ್ಟೇ ಸವಾಲಿನ ಹವ್ಯಾಸವೂ ಹೌದು. ಒಂದು ಚಿತ್ರದ ಹಿಂದೆ ಛಾಯಾಗ್ರಾಹಕನ ಅನೇಕ ದಿನಗಳ ಕಾಯುವಿಕೆ, ತಾಳ್ಮೆ, ಪ್ರಾಣಿ, ಪಕ್ಷಿ, ಕಾಡು, ಗಿಡಗಳ ಮಾಹಿತಿಯೊಂದಿಗೆ ಸುತ್ತಲಿನ ಪರಿಸರದ ಬಗ್ಗೆ ವಿಶೇಷ ಅರಿವು ಅತ್ಯಂತ ಅಗತ್ಯ. ಸುಭಾಸ್ ಕಾಮತ್ ಓರ್ವ ಯಶಸ್ವಿ ಉದ್ಯಮಿ. ಆದರೆ ಅಲ್ಲೇ ಅವರು ನಿಲ್ಲದೆ ಹವ್ಯಾಸಕ್ಕೆಂದು ಛಾಯಾಗ್ರಹಣ ಕಲಿತು, ವನ್ಯಜೀವಿ ಛಾಯಾಗ್ರಹಣದ ಆಳ ಅಗಲಗಳನ್ನು ಕಲಿಯುತ್ತಾ ಆ ವಿಭಾಗದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ.
