ಡಿ.25,26 ಆಳ್ವಾಸ್ ನಲ್ಲಿ ನೀನಾಸಂ ನಾಟಕಗಳು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ , ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗದ
ಣದಲ್ಲಿ ಡಿ.25 ಮತ್ತು 26 ರಂದು ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಡಿ.25 ಗುರುವಾರದಂದು ಖ್ಯಾತ ಲೇಖಕಿ ಬಾನು ಮುಷ್ತಾಕ್ ರವರ ಕತೆಯಾಧಾರಿಸಿ ಡಾ.ಎಂ.ಗಣೇಶ್ ನಿರ್ದೇಶಿಸಿದ ಹೃದಯದ ತೀರ್ಪು ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.26 ಶುಕ್ರವಾರದಂದು ಮಲೆಯಾಳ ಮೂಲ ಜಿ. ಶಂಕರ್ ಪಿಳ್ಳೈ ರಚಿಸಿದ , ಡಾ.ನಾ.ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿ, ಶಂಕರ್ ವೆಂಕಟೇಶ್ವರ್ ನಿರ್ದೇಶಿಸಿದ ಅವತರಣಮ್ ಭ್ರಾಂತಾಲಯಮ್ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಪ್ರತಿದಿನ ಸಂಜೆ 6.45 ಕ್ಕೆ ಸರಿಯಾಗಿ ಆರಂಭವಾಗಲಿರುವ ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು ಹತ್ತು ನಿಮಿಷ ಮೊದಲೇ ಬರಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಎರಡೂ ನಾಟಕಗಳು ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದ ರಂಗಪ್ರಯೋಗಗಳು.
ಹೃದಯದ ತೀರ್ಪು ನಾಟಕದಲ್ಲಿ ಒಂದು ಸಾಂಸಾರಿಕ ವೃತ್ತಾಂತವೇ ಚಿತ್ರಿತವಾಗಿದೆ. ಮುಖ್ಯವಾಗಿ ತಾಯಿ, ಮಗ, ಸೊಸೆ, ಊರವರ ಮಧ್ಯೆ ನಡೆಯುವ ತಲ್ಲಣಗಳು ಹಾಗೂ ಭಾವನಾತ್ಕಕ ಸನ್ನಿವೇಶಗಳಿಂದ ಕೂಡಿದ ಈ ನಾಟಕ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೇ ಸಾಗುತ್ತಿದ್ದರೂ ಆ ಎಲ್ಲೆಗಳನ್ನು ಮೀರಿ ಹೆಣ್ಣಿನ ಒಳ ನೋಟಗಳ ಮುಖಾಂತರ ಅನನ್ಯವಾದ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುತ್ತಾ ಸಾಗುವ ಈ ರಂಗಪ್ರಸ್ತುತಿ ನೋಡುಗನ ಹೃದಯ ತಟ್ಟುತ್ತದೆ.

ಹುಚ್ಚಾಸ್ಪತ್ರೆಯ ರೋಗಿಗಳೇ ಸೇರಿ ಪ್ರಸ್ತುತಪಡಿಸುವ ನಾಟಕ ಅವತರಣಮ್ ಭ್ರಾಂತಾಲಯಮ್. ಹಾಗಂತ ಇದು ಹುಚ್ಚರ ಕುರಿತ ನಾಟಕವಲ್ಲ. ಇಲ್ಲಿ ನಟರು ನಿರ್ದೇಶಕನಿಗೇ ಅರೆವಳಿಕೆ ಕೊಟ್ಟು ಮಲಗಿಸುತ್ತಾರಾಗಿ ರಂಗಭೂಮಿಯೇ ರಂಗಭೂಮಿಯ ನಿಯಂತ್ರಣದ ವಿರುದ್ಧ ಬಂಡೇಳುತ್ತದೆ. ನಟರ ಚುರುಕು ನಡೆಯ ಅಭಿನಯ , ವಿಡಂಬನಾತ್ಮಕ ಗಂಭೀರ ಮಾತುಗಳು ನಗುವಿನ ಬುಗ್ಗೆ ಎಬ್ಬಿಸುತ್ತದೆ. ರಂಗಭೂಮಿಯೆಂಬ ಬೃಹತ್ ಕನ್ನಡಿಯಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಮಾಡುತ್ತದೆ.


















