ಪುತ್ತೂರು: ಅ.7ರಂದು ಶೌರ್ಯ ಜಾಗರಣ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮ
ಪುತ್ತೂರು: ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ವತಿಯಿಂದ ಶೌರ್ಯ ಜಾಗರಣಾ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮ ಅ.7 ರಂದು ಸಂಜೆ ಪುತ್ತೂರಿನ ಕಿಲ್ಲೇ ಮೈದಾನದಲ್ಲಿ ನಡೆಯಲಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.
ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಹಿಂದೂ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, 60ನೇ ವರ್ಷದ ಷಷ್ಟ್ಯಬ್ದಿ ಆಚರಣೆ ಅಂಗವಾಗಿ ಇದೀಗ ಬೃಹತ್ ಶೌರ್ಯ ಜಾಗರಣಾ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಸೆ.25 ರಂದು ರಥಯಾತ್ರೆ ಚಿತ್ರದುರ್ಗದಿಂದ ಹೊರಟಿದ್ದು, ಅ.7 ರಂದು ಬೆಳಿಗ್ಗೆ ರಥಯಾತ್ರೆ ಸುಬ್ರಹ್ಮಣ್ಯ, ಕಡಬ, ಉಪ್ಪಿನಂಗಡಿ ಮೂಲಕ ಪುತ್ತೂರಿಗೆ ಸಂಜೆ ಆಗಮಿಸಲಿದೆ. ಈ ಯಾತ್ರೆಯನ್ನು ವಿವಿಧ ಕಡೆಗಳಲ್ಲಿ ಸ್ವಾಗತಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ, ವಿಹಿಂಪ ಜಿಲ್ಲಾ ಸಹಸಂಚಾಲಕ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.



















