ಎ.ಜೆ. ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಸಹಜ ಉಸಿರಾಟಕ್ಕೆ ಅಪರೂಪದ ಶಸ್ತ್ರ ಚಿಕಿತ್ಸೆ| A.J. Hospital & Research Centre

ಎ.ಜೆ. ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಸಹಜ ಉಸಿರಾಟಕ್ಕೆ ಅಪರೂಪದ ಶಸ್ತ್ರ ಚಿಕಿತ್ಸೆ. 24 ದಿನ ಪ್ರಾಯದ ನವಜಾತ ಶಿಶುವನ್ನು ಸ್ತನ್ಯಪಾನ ಮತ್ತು ಉಸಿರಾಟದ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಉಸಿರಾಡಲು ಕಷ್ಟಪಡುತ್ತಾ ಶ್ವಾಸೋಚ್ಛಾಸ ಮಾಡುವಾಗ, ಎದೆಹಾಲು ಕುಡಿಯುವಾಗ ಮೈ ನೀಲಿ ವರ್ಣಕ್ಕೆ ತಿರುಗುತ್ತಿತ್ತು. ಪರಿಸ್ಥಿತಿ ಗಂಭೀರವಿದ್ದುದರಿಂದ ನಗರದ ಏಕೈಕ ನವಜಾತ ಶಿಶುಗಳ ಹೃದಯ ತಜ್ಞರಾದ ಪ್ರಸ್ತುತ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಪ್ರೇಮ್ ಆಳ್ವ ಅವರಿಗೆ ಶಿಶುವಿನ ನಿರ್ವಹಣೆ ಮಾಡುವಂತೆ ಕೋರಲಾಯಿತು. ಅವರು ಇ.ಸಿ.ಜಿ. ಮೂಲಕಪರೀಕ್ಷಿಸಿದಾಗ ಶಿಶುವಿನ ಹೃದಯದಿಂದ ಅಶುದ್ಧ ರಕ್ತವನ್ನು ಶ್ವಾಸಕೋಶಗಳಿಗೆ ಕಳಿಸುವ ಪಲ್ಮನರಿ ರಕ್ತನಾಳಗಳ ಒತ್ತಡ ತೀವ್ರವಾಗಿತ್ತು. ಇಂತಹ ಸ್ಥಿತಿಗೆ ಕಾರಣ ಯಾವುದು ಎಂದು ಕಂಡುಹಿಡಿಯಲು ನವಜಾತ ಶಿಶು ತಜ್ಞರಾದ ಡಾ. ಅಶ್ವಿಜ್ ಶ್ರಿಯನ್ ಅವರನ್ನು ಸಂಪರ್ಕಿಸಲಾಯಿತು. ಸಾಮಾನ್ಯವಾಗಿ ಕಂಡುಬರುವ ತೊಂದರೆಗಳ ಪತ್ತೆಗಾಗಿ ರಕ್ತಪರೀಕ್ಷೆ ಎಕ್ಸರೇ ಸಿ.ಟಿ. ಸ್ಕ್ಯಾನ್‍ಗಳನ್ನು ಮಾಡಿದಾಗ ಎಲ್ಲೂ ಖಚಿತ ಕಾರಣ ಸಿಗದಾಯಿತು. ಹಾಗಿದ್ದಲ್ಲಿ ಶ್ವಾಸನಾಳದಲ್ಲಿ ಏನಾದರೂ ಕಟ್ಟಿಕೊಂಡು ಇರಬಹುದೇ, ಆ ಕಾರಣದಿಂದ ಆಮ್ಲಜನಕ ಸಾಕಷ್ಟು ದೊರಕದೆ ಶಿಶುವು ಹೃದಯದ ತೊಂದರೆಗೆ ಒಳಗಾಗಿರಬಹುದು ಎಂದು ತಿಳಿಯಲು ಶ್ವಾಸನಾಳದ ಪ್ರತ್ಯೇಕ ಪರೀಕ್ಷೆಗೆ ನಿಗದಿಪಡಿಸಲಾಯಿತು.

ನಗರದ ಇ.ಎನ್.ಟಿ ಚಿಕಿತ್ಸಕರಾದ ಡಾಕ್ಟರ್ ಗೌತಮ್ ಕುಳಮರ್ವ ಅವರನ್ನು ಶಿಶುವಿನ ಮೂಗಿನಿಂದ ಶ್ವಾಸನಾಳದವರೆಗಿನ ಉಸಿರಾಟದ ದಾರಿಯಲ್ಲಿ
ತೊಂದರೆಗಳೇನಾದರೂ ಇವೆಯೇ ಎಂದು ನೋಡಲು ಹಾಗೂ ಸರಿಪಡಿಸಲು ಕೋರಲಾಯಿತು. ಅವರು ನವಜಾತ ಶಿಶುಗಳ ಅತ್ಯಾಧುನಿಕ ವಿಡಿಯೋ ಎಂಡೋಸ್ಕೋಪಿ ಮೂಲಕ ನೋಡಿದಾಗ ನಾಲಿಗೆಯ ಬುಡದ ಶ್ವಾಸನಾಳದ ಪ್ರವೇಶದ್ವಾರದಲ್ಲಿ ಒಂದು ಸಿಸ್ಟ್ (ನೀರ್ಗುಳ್ಳೆ) ಇರುವುದು ಕಂಡುಬಂತು. ಇದನ್ನು ಸ್ಕ್ಯಾನಿಂಗ್ ತಜ್ಞರಾದ ಡಾಕ್ಟರ್ಗ ಣೇಶ್ ಕಲ್ಲಕಟ್ಯ ಅವರು ಎಮ್.ಆರ್.ಐ. ಮೂಲಕ ಖಚಿತಪಡಿಸಿದರು. ಶಿಶುವು ಉಸಿರಾಟಕ್ಕಾಗಿ ಗಾಳಿ ಒಳಕ್ಕೆ ಎಳೆದುಕೊಳ್ಳುವಾಗ ಈ ಸಿಸ್ಟ್ ಶ್ವಾಸನಾಳದ ಬಾಗಿಲಲ್ಲಿ ತಡೆಯುತ್ತಿತ್ತು. ಅಷ್ಟು ಮಾತ್ರವಲ್ಲದೆ ಈ ಗುಳ್ಳೆಯ ಗಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ನಿವಾರಿಸದೆ ಬೇರೆ ಮಾರ್ಗವೇ ಇರಲಿಲ್ಲ. ಆದರೆ ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ ಯಾವುದೇ ಆಗಿದ್ದರೂ ಬಹಳ
ಕಷ್ಟ. ಅದರಲ್ಲಿಯೂ ಉಸಿರಾಟದ ತೊಂದರೆ ಇರುವ ಶ್ವಾಸನಾಳದಲ್ಲಿ ತಡೆಯುವ ಪ್ರಸಂಗವಂತೂ ಇನ್ನೂ ಕಷ್ಟ.

ಶಿಶುವು ಬೆಳೆದಾದ ಮೇಲೆ ಮಾಡೋಣವೆಂದು ಕಾಯುವಂತೆಯು ಇಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೆತ್ತವರಿಗೆ ವಿವರವಾಗಿ ತಿಳಿಸಿ ಅವರ ಸಂಪೂರ್ಣ ಒಪ್ಪಿಗೆ ಪಡೆದುಕೊಂಡು ಎಲ್ಲರೂ ಪರಸ್ಪರ ಚರ್ಚಿಸಿ ಶಸ್ತ್ರಕ್ರಿಯೆ ನಡೆಸುವ ತೀರ್ಮಾನ ಕೈಗೊಂಡರು. ಡಾ. ಗೌತಮ್ ಕುಳಮರ್ವ ಅವರು ಅರಿವಳಿಕೆ ತಜ್ಞರಾದ ಡಾ ಗುರುರಾಜ ತಂತ್ರಿಯವರ ಸಹಕಾರದೊಂದಿಗೆ ಎಂಡೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ನೀರ್ಗುಳ್ಳೆಯನ್ನು ಯಶಸ್ವಿಯಾಗಿ ಕತ್ತರಿಸಿ ತೆಗೆದರು. ನಂತರ ಎ.ಜೆ. ಆಸ್ಪತ್ರೆಯ ಪೆಥಾಲಜಿಸ್ಟ್ ಡಾ. ಸಂಧ್ಯಾ ಇಳಂತೋಡಿ ಅವರು ಈ ಗುಳ್ಳೆ ‘ಥೈರೋಗ್ಲೋಸಲ್ ಸಿಸ್ಟ್’ ಎಂದು
ಮೈಕ್ರೋಸ್ಕೋಪಿನ ಪರೀಕ್ಷೆಯಲ್ಲಿ ಖಚಿತಪಡಿಸಿದರು. ಶಿಶು ಗರ್ಭಾಶಯದಲ್ಲಿ ಬೆಳವಣಿಗೆಯ ಹಂತದಲ್ಲಿ ಇದ್ದಾಗ ಥೈರಾಯ್ಡ್ ಗ್ರಂಥಿಯ ಕೆಲವು ಕೋಶಗಳು ನಾಲಗೆಯ ಬುಡದಲ್ಲಿ ಬಾಕಿಯಾಗಿ ಉಳಿದುಕೊಂಡು ಈ ರೀತಿಯ ಗುಳ್ಳೆ ಉಂಟಾಗುತ್ತದೆ. ಇಂತಹ ಪ್ರಸಂಗಗಳು ಅಪರೂಪ. ಒಮ್ಮೆ ಕತ್ತರಿಸಿ ತೆಗೆದ ನಂತರ ಚೇತರಿಸಿಕೊಂಡ ಶಿಶುವನ್ನು ಒಂದು ವಾರದಲ್ಲಿ ಮನೆಗೆ ಕಳಿಸಲಾಯಿತು. ಅತ್ಯಂತ ಅಪರೂಪದ ಮತ್ತು ಪ್ರಾಣಾಪಾಯ ಉಂಟು ಮಾಡುವಂತಹ ಕ್ಲಿಷ್ಟಕರವಾದ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ವೈದ್ಯಕೀಯ ತಂಡವನ್ನು ಎ.ಜೆ. ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾರ್ಲ ಶ್ಲಾಘಿಸಿದರು.