“ಸಿನೆಮಾ ಮತ್ತು ಸಿನೆಮಾ ನಿರ್ಮಾಣ” : ಮೂಡುಬಿದರೆಯ ಆಳ್ವಾಸ್‍ನಲ್ಲಿ ಕಾರ್ಯಾಗಾರ
ಮೂಡುಬಿದಿರೆ: `ಸಿನಿಮಾವು ಕಲೆ, ತಂತ್ರಜ್ಞಾನದ ಸಮ್ಮಿಲನವಾಗಿದ್ದು, ವಿಜ್ಞಾನ, ಮನೋರಂಜನೆ ಎಲ್ಲವೂ ಇಲ್ಲಿದೆ. ಇದು ಅತ್ಯಂತ ಪ್ರಭಾವ ಬೀರುವ ಮಾಧ್ಯಮ’ ಎಂದು ಸಿನಿಮಾ ಬರಹಗಾರ ಮತ್ತು ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಿನಿಮಾ ಸಮಾಜದಲ್ಲಿ ಸಿನಿಮಾ ಮತ್ತು ಸಿನಿಮಾ ನಿರ್ಮಾಣ' ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಾನವನು ನೀರಿನಲ್ಲಿ ಪ್ರತಿಬಿಂಬವನ್ನು ನೋಡಿ ಕನ್ನಡಿಯನ್ನು ಆವಿಷ್ಕರಿಸಿದ್ದು, ಮುಂದುವರಿದ ಭಾಗವಾಗಿ ಚಿತ್ರಗಳಿಗೆ
ಚಲನಚಿತ್ರ’ ಆವಿಷ್ಕರಿಸಿದ್ದಾನೆ. ಲುಮಿರೇ ಸಹೋದರರು ಅಭಿವೃದ್ಧಿ ಪಡಿಸಿದ ಸಿನಿಮಾವು ಅನೇಕ ಆವಿಷ್ಕಾರಗಳ ಪರಿಣಾಮವಾಗಿ ಇಂದು ವಿಶ್ವದಾದ್ಯಂತ ಮನ್ನಣೆ ಪಡೆದಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಸಿನಿಮಾ ಹಾಗೂ ಜೀವನಕ್ಕೆ ಅವಿನಾಭಾವ ಸಂಬಂಧವಿದೆ. ತಾವು ಸ್ವತಃ ಅನುಭವಿಸಿದ ಘಟನೆಗಳಿಂದ ಕಥೆಗಳು ಸೃಜಿಸುತ್ತವೆ. ನಂತರ ಇದೇ ಉತ್ತಮ ಸಿನಿಮಾವಾಗಿ ಹೊರಹೊಮ್ಮುತ್ತದೆ. ಹಿಂದೆಲ್ಲ ಜನರು ಪುರಾಣಗಳನ್ನು ಉಲ್ಲೇಖಸಿ ಮಾತನಾಡುತ್ತಿದ್ದರು. ಇಂದು ಸಿನಿಮಾವನ್ನು ಉಲ್ಲೇಖಸಿ ಮಾತನಾಡುವಷ್ಟು ಪ್ರಭಾವ ಬೀರಿದೆ. ಇದರಿಂದ ಒಳಿತು- ಕೆಡುಕು ಎರಡೂ ಆಗಿದೆ ಎಂದರು.
ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ಹೊಡೆಯಾಲ, ಸಾತ್ವಿಕ್, ಹರ್ಷವರ್ಧನ ಪಿ.ಆರ್., ಸೈಯ್ಯದ್ ಸಮನ್, ನವ್ಯಾ, ದೀಕ್ಷಿತಾ, ನಿಶಾನ್ ಕೋಟ್ಯಾನ್, ಇಂಚರಾಗೌಡ ಉಪಸ್ಥಿತರಿದ್ದರು.