ನನ್ನ ಮೇಲೆ ಆರೋಪಗಳನ್ನು ಮಾಡುತ್ತಿರುವುದು ವಿಷಾದನೀಯ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ನಾನು ಬಿಜೆಪಿ, ಸಂಘ ಪರಿವಾರ ಮತ್ತು ಅದರ ಸಿದ್ಧಾಂತಕ್ಕಾಗಿ ವರ್ಷಾನುಗಟ್ಟಲೆ ಕೆಲಸ ಮಾಡಿದ್ದೇನೆ. ಅದೇ ಸಂಘದ ಶಾಖೆಯಲ್ಲಿ ಕೆಲಸ ಮಾಡಿದವರು ಇವತ್ತು ನನ್ನ ವಿರುದ್ಧ ತೀರಾ ಕೇವಲವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಸಂಘದ ಸಂಸ್ಕಾರದಲ್ಲಿ ಬೆಳೆದವರ ಬಾಯಿಂದ ಇಂಥ ಮಾತುಗಳೇ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಈ ಎಲ್ಲ ಆರೋಪಗಳಿಗೆ ನಾನೇನು ಉತ್ತರ ಹೇಳುವುದಿಲ್ಲ. ಆರೋಪ ಮಾಡುವವರು ನೇರವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಬರಲಿ. ಅಲ್ಲಿ ಆಣೆ ಪ್ರಮಾಣ ಮಾಡಲಿ. ನಾನು ಕೂಡ ಮಾಡಲು ಸಿದ್ಧ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ನನಗೆ ಆಶೀರ್ವಾದ ನೀಡಿ ಕಳಿಸಿದ್ದಾರೆ. ಅಂಥ ಸ್ವಾಮೀಜಿಯವರ ವಿಚಾರದಲ್ಲಿ ತಿರುಚಿದ ಮಾಹಿತಿ ಪ್ರಚಾರ ಮಾಡಲಾಗುತ್ತಿದೆ. ಸ್ವಾಮೀಜಿಗಳನ್ನು ಅಪಾರವಾಗಿ ಗೌರವಿಸುವವ ನಾನು. ಸ್ವಾಮೀಜಿಗಳ ಹೆಸರಿನಲ್ಲಿ ದಯವಿಟ್ಟು ವಿವಾದ ಮಾಡಬಾರದು. ನನ್ನನ್ನು ತೇಜೋವಧೆ ಮಾಡಲು ಇನ್ನಿಲ್ಲದ ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಸಂಘ ಶಿಕ್ಷಣ ಪಡೆದವರಿಂದಲೇ ಈ ಕೆಲಸ ನಡೆಯುತ್ತಿರುವುದು ವಿಷಾದನೀಯ. ನನ್ನ ಮೇಲೆ 28 ಕೇಸುಗಳಿದ್ದವು. ಈಗಲೂ ಅನೇಕ ಕೇಸುಗಳು ಉಳಿದುಕೊಂಡಿವೆ. ಆದರೆ ಈ ಎಲ್ಲ ಕೇಸುಗಳು ಸಮಾಜದ ಹಿತಕ್ಕಾಗಿ ಮಾಡಿದ ಹೋರಾಟಕ್ಕೆ ಬಿದ್ದ ಕೇಸುಗಳೇ ಹೊರತು ಯಾವುದೂ ವೈಯಕ್ತಿಕವಲ್ಲ. ನಾನು ಈಗಲೂ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾರ ಜತೆಗೂ ಹಣದ ವ್ಯವಹಾರ ಮಾಡಿಲ್ಲ. ಇದೆಲ್ಲವನ್ನೂ ನಾನು ಅಗತ್ಯ ಬಿದ್ದರೆ ದೇವರ ಮುಂದೆ ಹೇಳಲು ಸಿದ್ಧ. ಆರೋಪ ಮಾಡುವವರು ಮಹಾಲಿಂಗೇಶ್ವರನ ನಡೆಗೆ ಬರಲಿ. ಅಲ್ಲಿ ಆಣೆ ಪ್ರಮಾಣಕ್ಕೆ ನಾನು ಸಿದ್ಧ. ಎಲ್ಲವನ್ನೂ ನಾನು ದೇವರ ಮೇಲೆ ಹಾಕಿ ಬಿಡುತ್ತೇನೆ ಎಂದರು.
ತನ್ನ ಪ್ರಣಾಳಿಕೆ ಬಿಡುಗಡೆ ಸಮಾರಂಭ ಏ. 26ರಂದು ಬೆಳಗ್ಗೆ 10.30ಕ್ಕೆ ಪುತ್ತೂರಿನ ದರ್ಬೆ ಸುಭದ್ರಾ ಸಭಾಭವನದಲ್ಲಿ ನಡೆಯಲಿದೆ. ಪುತ್ತೂರಿನ ಅಭಿವೃದ್ಧಿ ವಿಚಾರ ಮತ್ತು ಸಿದ್ಧಾಂತ ಸೇರಿದಂತೆ ಅನೇಕ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಈಗಾಗಲೇ ಕ್ಷೇತ್ರದ ನಾನಾ ಕಡೆ ಸಭೆಗಳನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೈಕ್ ರ್ಯಾಲಿ, ಜಾಥಾ ಇತ್ಯಾದಿ ನಡೆಯಲಿದೆ ಎಂದರು.
ಹಿರಿಯ ಮುಖಂಡರಾದ ಸುನಿಲ್ ಬೋರ್ಕರ್ ಉಪಸ್ಥಿತರಿದ್ದರು.