ಮುಂಬರುವ ಚುನಾವಣೆಯಲ್ಲಿ ರಾಜೇಶ್ ನಾಯಕ್‍ ರೇ ಶಾಸಕರಾಗಬೇಕು : ಕೇರಳ ರಾಜ್ಯ ಬಿಜೆಪಿ ಖಜಾಂಚಿ ಕೃಷ್ಣದಾಸ್ ಹೇಳಿಕೆ

ಬಂಟ್ವಾಳ: ರಾಜೇಶ್ ನಾಯ್ಕ ಅವರು ಬಂಟ್ವಾಳ ಶಾಸಕರಾದ ಮೇಲೆ ಗಲಭೆಗಳಾಗಿಲ್ಲ. ಅದಕ್ಕೆ ಸಂಬಂಧಿಸಿ ಸೆಕ್ಷನ್, ಕರ್ಪೂ, ನಿಷೇಧಾಜ್ಞೆಗಳನ್ನು ವಿಧಿಸಲಾಗಿಲ್ಲ. ಎಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಅವರು ಶಾಸಕರಾದ ಮೇಲೆ ಶಾಂತಿ, ಸುವ್ಯವಸ್ಥೆ ನೆಲೆಸಿದ್ದು, ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳೂ ಆಗಿವೆ. ಹೀಗಾಗಿ ಮುಂಬರುವ ಚುನಾವಣೆಯಲ್ಲೂ ಅವರೇ ಶಾಸಕರಾಗಿ ಆಯ್ಕೆಯಾಗಬೇಕು ಎಂದು ಕೇರಳ ರಾಜ್ಯ ಬಿಜೆಪಿ ಖಜಾಂಚಿ ಕೃಷ್ಣದಾಸ್ ಹೇಳಿದರು.

ಬಂಟ್ವಾಳದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಮ್ರಾನ್ ಪ್ರತಾಪ್ ಘಡಿಯಂಥವರು ಭೀತಿವಾದವನ್ನು ಬೆಂಬಲಿಸುವವರು, ಅಂಥವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿಸಿದೆ,ಇದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು. ಬಂಟ್ವಾಳ ಪುರಸಭೆಯಲ್ಲಿ ಎಸ್.ಡಿ.ಪಿ.ಐ.ನೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮೂಲಕ ಆಡಳಿತ ನಡೆಸುತ್ತಿದ್ದು, ಆ ಪಕ್ಷದೊಂದಿಗೆ ಚುನಾವಣಾ ಒಪ್ಪಂದ ಮಾಡಿರಬಾರದೇಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ಉನ್ನತ ನಾಯಕರು ಇನ್ನಷ್ಟೇ ಪ್ರಚಾರಕ್ಕೆ ಬರಬೇಕಿದ್ದು, 120ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.
ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಈಗಾಗಲೇ ಹಲವು ಹಂತಗಳ ಪ್ರಚಾರಗಳನ್ನು ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಬಿರುಸಿನ ಪ್ರಚಾರವನ್ನು ಮನೆಮನೆಗೆ ತೆರಳಿ ಮಾಡಲಿದ್ದೇವೆ ಎಂದರು.

ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ, ಕೇರಳ ಮುಖಂಡ ಹರಿದಾಸ್, ದ.ಕ. ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಕ್ಷೇತ್ರ ಪ್ರಭಾರಿ ರವಿಶಂಕರ ಮಿಜಾರ್, ಕ್ಷೇತ್ರ ಚುನಾವಣಾ ಪ್ರಮುಖರಾದ ದೇವದಾಸ ಶೆಟ್ಟಿ, ವಿಸ್ತಾರಕ್ ನವೀನ್ ಕುಮಾರ್ ಅಯೋಧ್ಯ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಮಾಧ್ಯಮ ಪ್ರಮುಖ್ ರಂಜಿತ್ ಮೈರ ಉಪಸ್ಥಿತರಿದ್ದರು

Related Posts

Leave a Reply

Your email address will not be published.