ಮಂಗಳೂರಿನಲ್ಲಿ ಜ.31 ಮತ್ತು ಫೆ.1ರಂದು ಆಯುಷ್ ಹಬ್ಬ-2026
ಆಯುಷ್ ಹಬ್ಬ ಸಮಿತಿ 2026, ವತಿಯಿಂದ ಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮತ್ತು ಎಲ್ಲಾ ಆಯುಷ್ ಆಸ್ಪತ್ರೆಗಳು, ಕಾಲೇಜುಗಳು ಹಾಗೂ ವೃತ್ತಿ ನಿರತ ಆಯುಷ್ ವೈದ್ಯರುಗಳ ಜಂಟಿ ಆಶ್ರಯದಲ್ಲಿ 2026 ರ ಜನವರಿ 31 ಮತ್ತು ಫೆಬ್ರವರಿ 1 ಶನಿವಾರ ಭಾನುವಾರಗಳಂದು “ಆಯುಷ್ ಹಬ್ಬ” ಜರುಗಲಿದೆ.
ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಟಿ ಎಂ ಎ ಪೈ ಸಭಾಂಗಣದಲ್ಲಿ ನಡೆಯಲಿರುವ ಈ ಮಹಾ ಮೇಳದಲ್ಲಿ ಸಾರ್ವಜಕರಿಗೆ ಉಪಯುಕ್ತವಾದ, ಸ್ವಾಸ್ಥ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಈಗಾಗಲೇ ಈ ಸಂಭ್ರಮಾಚರಣೆಯ ಪೂರ್ವಸಿದ್ಧತೆಗಳ ಬಗ್ಗೆ ಆಯುಷ್ ವೈದ್ಯರು ,ಆಯುಷ್ ಕಾಲೇಜುಗಳ ಆಡಳಿತ ಮಂಡಳಿ, ಆಯುಷ್ ಫಾರ್ಮಸಿ,ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ಮುಖ್ಯಸ್ಥರ ಸಭೆಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಆಯುಷ್ ಜೀವನ ಪದ್ಧತಿಗಳ ಪರಿಪೂರ್ಣ ಮಾಹಿತಿ ಮತ್ತು ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಹಾಗೂ ಜನರು ಆಯ್ಕೆ ಮಾಡಬಹುದಾದ ಹಲವಾರು ಪ್ರಮುಖ ಅಂಶಗಳನ್ನು ಹೊಂದಿರುವ ವೈಶಿಷ್ಟ್ಯಗಳನ್ನು ನೀಡಲು ನಿರ್ಧರಿಸಲಾಗಿದೆ.

ಆಯುಷ್ ಪದ್ಧತಿಗಳ ಮೂಲಕ ಸೇವೆಗೈಯ್ಯುವ ಎಲ್ಲರನ್ನೂ ಒಂದುಗೂಡಿಸಿ ಸಂಭ್ರಮಾಚರಣೆ ಮಾಡಲು ದಶಕಗಳ ಹಿಂದೆಯೇ ನಿರ್ಧರಿಸಿದ್ದು ಅದರರಂತೆ ೨೦೧೪ ರಲ್ಲಿ ಆಯುಷ್ ಉತ್ಸವ ಮತ್ತು ೨೦೧೫ ರಲ್ಲಿ ಆಯುಷ್ ಹಬ್ಬಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು.
ಅದರ ಅಭೂತಪೂರ್ವ ಯಶಸ್ಸಿನ ಪರಿಣಾಮವಾಗಿ ಆಯುಷ್ ಪದ್ಧತಿಗಳ ಬಗ್ಗೆ ಜನರಲ್ಲಿ ಹೆಚ್ಚಿನ ವಿಶ್ವಾಸಾರ್ಹತೆ ಮಾಡಿರುವುದನ್ನು ಕಾಣಬಹುದಾಗಿದೆ. ಇಂದು ಜಿಲ್ಲೆಯಲ್ಲಿ ಹಲವು ಆಯುಷ್ ಕಾಲೇಜುಗಳು,ಆಸ್ಪತ್ರೆಗಳು ಮಾತ್ರವಲ್ಲದೆ ಅಲೋಪತಿ ಆಸ್ಪತ್ರೆಗಳಲ್ಲಿ ಕೂಡಾ ಆಯುಷ್ ಚಿಕಿತ್ಸಾ ಸೇವೆಗೆ ಬೇಡಿಕೆ ಹೆಚ್ಚಿರುವುದು ಗಮನಾರ್ಹ ಅಂಶವಾಗಿದೆ.
ಈಗ ದಶಕದ ನಂತರ ಮತ್ತೊಮ್ಮೆ ಎಲ್ಲಾ ಆಯುಷ್ ಸಂಬಂಧಿತ ಸಂಸ್ಥೆಗಳು, ಫಾರ್ಮಸಿ,ಆಸ್ಪತ್ರೆ, ಕಾಲೇಜು, ಚಿಕಿತ್ಸಾಲಯಗಳು ಮೊದಲಾದ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ಬಂಧುಗಳನ್ನು ಒಂದುಗೂಡಿಸಿ ಆಯುಷ್ ಪದ್ಧತಿಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಈ ಆಯುಷ್ ಹಬ್ಬ ೨೦೨೬ನ್ನು ಆಯೋಜನೆ ಮಾಡಲಾಗಿದೆ.
ಭಾರತ ಸರಕಾರದ ಆಯುಷ್ ಇಲಾಖೆ ಮತ್ತು ಕರ್ನಾಟಕ ಸರಕಾರ ಸಹಕಾರದೊಂದಿಗೆ ಆಯುಷ್ ಹಬ್ಬ ೨೦೨೬ ನಡೆಸಲು ನಿರ್ಧರಿಸಲಾಗಿದೆ. ಎರಡು ದಿಗಳಲ್ಲಿ ಸುಮಾರು ೫೦೦೦ ವೈದ್ಯರು, ೧೦೦೦೦ ಆಯುಷ್ ವೈದ್ಯ ವಿದ್ಯಾರ್ಥಿಗಳು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ೨೦೦೦೦ ಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಬಹುದೆಂದು ಅಂದಾಜಿಸಲಾಗಿದೆ. ಅದಕ್ಕೆ ಅಗತ್ಯವಾದ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಡಾ. ಆಶಾಜ್ಯೋತಿ ರೈ ಮಾಲಾಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಆಯುಷ್ ಹಬ್ಬ ಸಮಿತಿ ಅಧ್ಯಕ್ಷರಾದ ಡಾ.ಕೇಶವ ಪಿ.ಕೆ. ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ ಉಪಸ್ಥಿತರಿದ್ದರು.


















