ಬೈಂದೂರು ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ
ಇಡೀ ಕ್ಷೇತ್ರದ ರಾಜಕಾರಣದ ದಿಕ್ಕನ್ನು ಬದಲಾಯಿಸುವ ಶಕ್ತಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗಿದೆ. ಆ ಹಿನ್ನೆಲೆಯಲ್ಲಿ ಪ್ರಣಾಳಿಕೆಯನ್ನು ಮನೆ ಮನೆಗೂ ತಲುಪಿಸುವ ಕಾರ್ಯ ವಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ವತಿಯಿಂದ ತ್ರಾಸಿಯ ಕೊಂಕಣ ಖಾರ್ವಿ ಸಭಾಭವನದಲ್ಲಿ ನಡೆದ ಪಂಚಾಯತ್ ಪ್ರತಿನಿಧಿಗಳ ಸಮಾವೇಶದಲ್ಲಿ ಪಕ್ಷದ ಬೈಂದೂರು ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಬಿಜೆಪಿ ಸರ್ಕಾರ ಇವತ್ತು ಪಂಚಾಯತ್ ವ್ಯವಸ್ಥೆಗೆ ಶಕ್ತಿ ನೀಡಿದೆ. ಶಾಸನಬದ್ದ ಅನುದಾನ ಇವತ್ತು ಉಳ್ಳಾಲದಂತಹ ಗ್ರಾಮ ಪಂಚಾಯಿತಿಗೆ ಜನಸಂಖ್ಯಾಗನುಗುಣವಾಗಿ 98 ಲಕ್ಷ ಸಿಗುತ್ತದೆ. ಪಂಚಾಯತ್ ಪ್ರತಿನಿಧಿಗಳ ಗೌರವ ಧನ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಳವಾಗಿದೆ ಎಂದರು. ಒಳಮೀಸಲಾತಿಯ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಜೇನು ಗೂಡಿಗೆ ಕೈಹಾಕಿದ್ದಾರೆ ಎಂದು ಟೀಕಿಸಿದರು. ಜೇನು ಗೂಡಿಗೆ ಕೈ ಹಾಕಿದ್ದು ನಿಜ, ಜೇನು ತಗೆದೇ ತಗೆಯುತ್ತೇವೆ. ಎಂದ ಅವರು, ಗುರುರಾಜ ಗಂಟಿಹೊಳೆ ಅಪರೂಪದ ಅಭ್ಯರ್ಥಿ. ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವ ಕೆಲಸವಾಗಬೇಕು ಎಂದರು.
ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಮಾತನಾಡಿ, ಒಮ್ಮೆಯಾದರೂ ಕಾರ್ಯಕರ್ತರು ಜನಪ್ರತಿನಿಧಿಗಳಾಗಬೇಕು. ಪಂಚಾಯತ್ ಸದಸ್ಯರಿಗೆ ಜನರ ಸಮಸ್ಯೆ ಏನು ಎನ್ನುವುದರ ಸ್ಪಷ್ಟವಾದ ಅರಿವಿರುತ್ತದೆ. ಪ್ರತಿ ವಾರ್ಡ್ ಸ್ಪಷ್ಟ ಚಿತ್ರಣ ಗ್ರಾ.ಪಂಗೆ ಸ್ಪರ್ಧಿಸಿ ಸೋತವರು ಅಥವಾ ಗೆದ್ದವರಿಗೆ ತಿಳಿದಿರುತ್ತದೆ. ಒಂದು ಗ್ರಾಮದಲ್ಲಿ ಯೋಜನೆಯ ಸಮರ್ಪಕ ಅನುಷ್ಟಾನ, ಅನುದಾನ ಎಲ್ಲಿ ಹಾಕಬೇಕು ಎನ್ನುವುದನ್ನು ಸ್ಥಳೀಯ ಗ್ರಾ.ಪಂ. ಸದಸ್ಯರಲ್ಲಿ ಚರ್ಚಿಸಿ ಅನುಷ್ಟಾನಿಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಶಾಸಕನಾದರೆ ಗ್ರಾಮ ಪಂಚಾಯತ್ ಸದಸ್ಯರ ಮೂಲಕ ಚರ್ಚಿಸಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುಂದುವರಿಯಲು ಯೋಚಿಸಿದ್ದೇನೆ ಎಂದರು.
ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕ್ಷೇತ್ರದ ಉಸ್ತುವಾರಿ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.
ಚುನಾವಣಾ ಪ್ರನಾಳಿಕೆ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಪ್ರನಾಳಿಕೆಯ ಬಗ್ಗೆ ವಿವರಿಸಿದರು. ಮಂಡಲದ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದ ಖಾರ್ವಿ ವಂದಿಸಿದರು. ಮಂಡಲದ ಪ್ರಧಾನಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.


















