ಬೈಂದೂರು: ಅಕಾಲಿಕ ಮಳೆಯಿಂದಾಗಿ ಭತ್ತದ ಕೃಷಿಗೆ ಜಲ ದಿಗ್ಬಂಧನ

ಬೈಂದೂರು ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಭತ್ತದ ಫಸಲು ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಕೃಷಿಕರು ಕಂಗಾಲಾಗಿ ದಿಕ್ಕು ತೋಚದಂತಾಗಿದೆ. ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಪೈರುಗಳು ಹಾಗೂ ಕಟಾವಿನ ನಂತರ ಜಾನುವಾರುಗಳ ಒಣ ಹುಲ್ಲುಗಳು, ಜೊತೆಗೆ ಕಟಾವಿನ ನಡುವೆ ದ್ವಿದಳ ಧಾನ್ಯಗಳನ್ನು ಸಹ ಈಗಾಗಲೇ ಬಿತ್ತನೆ ಮಾಡಿದ್ದು, ಅದು ಕೂಡ ಮಳೆಯಿಂದ ಹಾನಿಯಾಗಿ ಅಪಾರವಾದ ಬೆಳೆ ಹಾಗೂ ಜಾನುವಾರುಗಳ ಮೇವಿನ ಹುಲ್ಲುಗಳು ಹಾನಿಯಾಗಿದೆ.

ಕೋಣ್ಕಿ, ಬಡಾಕೆರೆ, ತಾರೀಬೇರು, ಜಡ್ಡಾಡಿ, ಕಡಿಕೆ ನಾಡದ ಹಲವು ಬೈಂದೂರಿನ ಹಲವು ಕಡೆಗಳಲ್ಲಿ ಗದ್ದೆಯಲ್ಲಿ ನೀರು ನಿಂತು ಕೃಷಿಗೆ ತುಂಬಾ ಹಾನಿಯಾಗಿದೆ. ಒಂದು ಕಡೆ ನೆರೆಯ ಹಾವಳಿ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಹೇಗೋ ಕೃಷಿಕರು ಬೆಳೆಗಳನ್ನು ರಕ್ಷಿಸಿಕೊಂಡಿದ್ದರು ಸಹ ಮಳೆಯಿಂದಾಗಿ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಒಂದು ಕಡೆ ಕ್ಷೀಣಿಸುತ್ತಿರುವ ಕೃಷಿ, ಇನ್ನೊಂದು ಕಡೆ ಪ್ರಕೃತಿಯ ವಿಕೋಪದ ನಡುವೆ ಕೃಷಿಕರ ಪಾಡು ಹೇಳತೀರದಾಗಿದೆ. ಸದ್ಯದ ಸನ್ನಿವೇಶಗಳಲ್ಲಿ ಕೃಷಿಯು ನಶಿಸಿ ಹೋಗುತ್ತಿರುವ ಕಾಲದಲ್ಲಿಯೂ ಕೂಡ ಪಾರಂಪರಿಕ ಕೃಷಿಯನ್ನು ಉಳಿಸಿಕೊಂಡು ಹೋಗುವ ಜೊತೆಗೆ ಕೃಷಿಯ ಬಗ್ಗೆ ಒಲವು ತೋರಿ ಹೇಗೋ ಸಂಘ ಸಂಸ್ಥೆಗಳಿಂದ ಸಾಲ ಪಡೆದು ಕೃಷಿಯನ್ನೇ ಅವಲಂಬಿಸಿರುವ ಜನರು ಈ ಮಳೆಯಿಂದಾಗಿ ಕೈಗೆ ಬಂದ ಫಸಲು ಬಾಯಿಗೆ ಬರದಂತಾಗಿದೆ. ಹಾಗಾಗಿ ಸರಕಾರ ಹಾಗೂ ಕೃಷಿ ಇಲಾಖೆ ಈ ಕಡೆ ಗಮನ ಹರಿಸಿ ಬೆಳೆ ಪರಿಹಾರ ನೀಡಿ ಕೃಷಿಕರಿಗೆ ಪೆÇ್ರೀತ್ಸಾಹಿಸಬೇಕಾಗಿದೆ.

ಕೃಷಿಕರಾದ ರಾಜು ಮೊಗವೀರ ಅವರು ಮಾತನಾಡಿ, ಅಕಾಲಿಕ ಮಳೆಯಿಂದ ಭತ್ತದ ಕೃಷಿ ನಾಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿ ಕೇಳಿಕೊಂಡರು. ಈ ನಡುವೆ ಇಂದು ಸ್ಥಳಕ್ಕೆ ಬೈಂದೂರು ಕೃಷಿ ಅಧಿಕಾರಿಗಳಾದ ರೂಪ ಜೆ ಮಾಡ, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಪರಶುರಾಮ ಎಂ ಕೃಷಿ ಅಧಿಕಾರಿಗಳು ಬೈಂದೂರು ಇವರು ಭೇಟಿ ನೀಡಿ ಸರ್ಕಾರದಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಶೆಟ್ಟಿ ,ಶ್ರೀಧರ್ ದೇವಾಡಿಗ, ಸುಜಾತ ಮಗವಿರ, ನಾಗೇಶ್ ಅಡಿಗ ಪ್ರಭಾಕರ್ ಮೊಗವೀರ, ಗಣೇಶ್ ಮೊಗವಿರ, ಲಚ್ಚು ಪೂಜಾರಿ ಉದಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.