ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿ ಸಾವು
ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ೭೫ ರ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.
ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ (೨೩) ಮೃತಪಟ್ಟ ಯುವತಿ.
ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಂಜೆ ಕೆಲಸ ಬಿಟ್ಟು ದಾಸಕೋಡಿ ಎಂಬಲ್ಲಿ ಬಸ್ಸಿನಿಂದ ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಯುವತಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಳು.
ಘಟನೆಯಲ್ಲಿ ಕಾರು ಉರುಳಿ ಬಿದ್ದಿದೆ. ಯುವತಿಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.