ಮೂಡುಬಿದಿರೆ: ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು-ಇರುವೈಲು ಗ್ರಾಮಸಭೆ ರದ್ದು
ಮೂಡುಬಿದಿರೆ: ವಿವಿಧ ಇಲಾಖೆಗಳ ಅಧಿಕಾರಿಗಳಿಲ್ಲದೆ ಗ್ರಾಮಸಭೆ ನಡೆಸಬಾರದೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸಭೆಯನ್ನು ರದ್ದುಗೊಳಿಸಿದ ಘಟನೆ ಇರುವೈಲಿನಲ್ಲಿ ನಡೆದಿದೆ.
ಇರುವೈಲು ಗ್ರಾ.ಪಂನ ಎರಡನೇ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ಲಲಿತಾ ಮೊಗೇರ ಅವರ ಅಧ್ಯಕ್ಷತೆಯಲ್ಲಿ ತೋಡಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಬಂದಿದ್ದು ಉಳಿದ ಅಧಿಕಾರಿಗಳು ಯಾಕೆ ಭಾಗವಹಿಸಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಮಾಜಿ ಸದಸ್ಯ ಜಯರಾಮ್ ಬಂಗೇರ ಮಾತನಾಡಿ, ಗ್ರಾಮಸಭೆಯಲ್ಲಿ ಅತಿ ಅಗತ್ಯವಾಗಿ ಇರಬೇಕಾದ ಗ್ರಾಮಕರಣಿಕರು, ಮೆಸ್ಕಾಂ, ಪಶುಸಂಗೋಪನೆ ಸಹಿತ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಬಂದಿಲ್ಲ. ವಿವಿಧ ಇಲಾಖೆಯ ಸಮಸ್ಯೆಗಳ ಕುರಿತು, ಆ ಇಲಾಖೆಗಳ ಮಾಹಿತಿಯನ್ನು ಪಂಚಾಯತ್ ಅಧಿಕಾರಿಗಳು, ಸದಸ್ಯರು ನೀಡಲು ಸಾಧ್ಯವೇ?. ಗ್ರಾಮಸಭೆಗೆ ಕನಿಷ್ಠ ೧೫ ಇಲಾಖೆಗಳ ಅಧಿಕಾರಿಗಳು ಇರಬೇಕು ಎಂದು ಹೇಳಿದರು.
ಜನರಿಗೆ ಅಗತ್ಯ ಮಾಹಿತಿಗಾಗಿ ಬೇಕಾದಂತಹ ಅಧಿಕಾರಿಗಳು ಇರದಿದ್ದರಿಂದ ಸಭೆಯನ್ನು ರದ್ದುಗೊಳಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಈ ಕುರಿತು ಗ್ರಾಮಸ್ಥರು ಪ್ರಶ್ನಿಸುವ ವೇಳೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಾಮಕಿ ನಡೆದಿದೆ.
ಜಯರಾಮ್ ಬಂಗೇರ, ಪ್ರವೀಣ್, ಆನಂದ, ಪ್ರಶಾಂತ್, ರಾಜೇಶ್ ನಾಯ್ಕ್, ಮೋಹನ ನಾಯ್ಕ್ ಪಂಜ ವಿಚಾರಕ್ಕೆ ಪೂರಕವಾಗಿ ಮಾತನಾಡಿದರು. ಉಳಿದ ಗ್ರಾಮಸ್ಥರು ಧ್ವನಿಗೂಡಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಆಗಬೇಕಾದ ಯಾವುದೇ ಕೆಲಸಗಳು ಆಗ್ತಾ ಇಲ್ಲ. ಗ್ರಾಮಸಭೆಯಲ್ಲಾದರೂ ಈ ಬಗ್ಗೆ ಕೇಳೋಣವೆಂದರೆ ಅಧಿಕಾರಿಗಳೇ ಇಲ್ಲ ಎಂದು ಗ್ರಾಮಸ್ಥ ಶಂಕರ್ ನಾಯ್ಕ್ ಹೇಳಿದರು.
ಗ್ರಾಮಸ್ಥರು ಹಾಗೂ ಸದಸ್ಯರ ನಡುವೆ ತೀವ್ರವಾಗಿ ಮಾತಿನ ಚಕಾಮಕಿ ಉಂಟಾದಾಗ ಮಧ್ಯಪ್ರವೆಶಿಸಿದ ನೋಡೆಲ್ ಅಧಿಕಾರಿ ಶೈಲಾ ಕೆ. ಕಾರಿಗಿ, ಎಲ್ಲರೂ ಒಟ್ಟಾಗಿ ಮಾತನಾಡಿದರೆ ಸಮಸ್ಯೆಗಳು ಅರ್ಥವಾಗುವುದಿಲ್ಲ. ಒಬ್ಬೊಬ್ಬರು ತಮ್ಮ ಸಮಸ್ಯೆಗಳನ್ನು ತಿಳಿಸಬೇಕು. ಗ್ರಾಪಂ ಗೈರಾದ ಅಧಿಕಾರಿಗಳ ಇಲಾಖೆಗಳಿಗೆ ನೋಟಿಸ್ ನೀಡಲಾಗುವುದು. ಈ ಸಂದರ್ಭದಲ್ಲಿ ಸಭೆ ನಡೆಸುವುದು ಅಸಾಧ್ಯ. ಮುಂದೂಡೋಣ ಎಂದರು. ಈ ಸಂದರ್ಭ ಪಿಡಿಒ ಶೇಖರ್, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.