ಬಂಟ್ವಾಳ : ಎರಡು ಎಕ್ರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿ – ಹೋಟೆಲ್ ಉದ್ಯಮಿಯೊಬ್ಬರ ಸಾಹಸಗಾಥೆ

ಬಂಟ್ವಾಳ: ಜಿಲ್ಲೆಯ ಹವಾಗುಣಕ್ಕೆ ಬೆಳೆ ಹೊಂದಿಕೆಯಾಗುವುದಿಲ್ಲ, ನೀರಾವರಿ ಸಮಸ್ಯೆ, ಅತಿವೃಷಿ, ಅನಾವೃಷಿಯಿಂದಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಜಮೀನಿದ್ದರೂ ಕೂಡ ದೊಡ್ಡ ಮಟ್ಟದಲ್ಲಿ ವಿದೇಶಿ ಹಣ್ಣುಗಳನ್ನು ಬೆಳೆಯಲು ಜಿಲ್ಲೆಯ ರೈತರು ನಿರಾಸಕ್ತಿ ತೋರುತ್ತಾರೆ. ಆದರೆ ಬಂಟ್ವಾಳದ ಹೊಟೇಲ್ ಉದ್ಯಮಿಯೊಬ್ಬರು ಸುಮಾರು 2 ಎಕರೆ ಭೂ ಪ್ರದೇಶದಲ್ಲಿ ಡ್ರ್ಯಾಗನ್ ಪ್ರೂಟ್ ಬೆಳೆದು ಯಶಸ್ವಿಯಾಗುವುದರ ಜೊತೆಗೆ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.

ಹೊಟೇಲ್ ಉದ್ಯಮಿಯಾಗಿದ್ದುಕೊಂಡು ವಿವಿಧ ಸಂಘಟನೆ ಹಾಗೂ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಚಂದ್ರಹಾಸ ಶೆಟ್ಟಿ ಡ್ರ್ಯಾಗನ್ ಪ್ರೂಟ್ ಬೆಳೆದ ರೈತರಾಗಿದ್ದು, ದ.ಕ. ಜಿಲ್ಲೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಡ್ರ್ಯಾಗನ್ ಪ್ರೂಟ್ ಬೆಳೆದ ಮೊದಲ ಕೃಷಿಕ ಎನಿಸಿಕೊಂಡಿದ್ದಾರೆ. ಕುರಿಯಾಳ ಗ್ರಾಮದ ನೋರ್ನಡ್ಕ ಪಡು ಎಂಬಲ್ಲಿ ಅವರ ಜಮೀನಿನಲ್ಲಿ ಡ್ರಾಗನ್ ಪ್ರೂಟ್‍ನ ತೋಟ ಸುಂದರವಾಗಿ ಕಂಗೊಳಿಸುತ್ತಿದೆ. ಸಾಲು ಸಾಲು ಸಿಮೆಂಟ್ ಕಂಬಳಲ್ಲಿ ಹರಡಿದ ಬಳ್ಳಿಯಲ್ಲಿ ನಸುಗೆಂಪು ಬಣ್ಣದ ಹಣ್ಣುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಕಳೆದ ಕರೋನಾ ಲಾಕ್‍ಡೌನ್ ವೇಳೆ ಚಂದ್ರಹಾಸ ಶೆಟ್ಟಿಯವರು ಮನೆಯಲ್ಲಿದ್ದಾಗ ಮೊಬೈಲ್‍ನಲ್ಲಿ ಯುಟ್ಯೂಬ್ ವೀಕ್ಷಿಸುತ್ತಿದ್ದ ಸಂದರ್ಭ ಬೆಂಗಳೂರಿನ ಯಲಹಂಕದಲ್ಲಿ ಶ್ರೀನಿವಾಸ ರೆಡ್ಡಿ ಎಂಬವರು ಸುಮಾರು 3 ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಪ್ರೂಟ್ ಕೃಷಿ ಮಾಡಿರುವುದನ್ನು ಗಮನಿಸಿದ ಚಂದ್ರಹಾಸ ಶೆಟ್ಟಯವರು ಶ್ರೀನಿವಾಸ ರೆಡ್ಡಿಯವರನ್ನು ಸಂಪರ್ಕಿಸಿ ಅವರ ತೋಟಕ್ಕೆ ಹೋಗಿ ಅದರ ಬಗ್ಗೆ ಮಾಹಿತಿ ಪಡೆದುಕೊಂಡು ನಮ್ಮೂರಲ್ಲೂ ಡ್ರ್ಯಾಗನ್ ಪ್ರೂಟ್ ಬೆಳೆಯ ಬಹುದು ಎನ್ನುವ ಆಶಾಭಾವನೆ ಮೂಡಿಸಿಕೊಂಡರು. ಕಡಿಮೆ ನೀರು, ಸೀಮಿತ ಗೊಬ್ಬರ, ರೋಗ ಬಾಧೆ ಕಡಿಮೆ, ನೀರು ನಿಲ್ಲದ ಇಳಿಜಾರು ಜಮೀನಿನಲ್ಲಿ ಡ್ರಾಗನ್ ಪ್ರೂಟ್ ಬೆಳೆಯಬಹುದು ಎಂದು ಕೊಂಡು ತನ್ನ ಜಮೀನಿನಲ್ಲಿ ಪ್ರಯೋಗ ಮಾಡಿದರು.

ಹೆಚ್ಚು ಇಳುವರಿ, ಉತ್ತಮ ಲಾಭ:

ಸಾಮಾನ್ಯವಾಗಿ ಉಷ್ಣ ಹವೆಯಲ್ಲಿ ಬೆಳೆಯುವ ಡ್ರಾಗನ್ ಪ್ರೂಟ್ ವರ್ಷದ ಆರು ತಿಂಗಳ ಕಾಲ ಮಳೆಯಿರುವ ಕರಾವಳಿಯಲ್ಲೂ ರೈತನ ಕೈ ಹಿಡಿದಿದೆ. ಚಂದ್ರಹಾಸ ಶೆಟ್ಟಿಯವರು ಡ್ರಾಗನ್ ಪ್ರೂಟ್ ಬೆಳೆದು ಕೇವಲ 1 ವರ್ಷ 6ತಿಂಗಳು ಆಗಿದೆಯಷ್ಟೇ. ನೆಟ್ಟು ಒಂದು ವರ್ಷ ಎರಡು ತಿಂಗಳು ಆಗುವ ಸಂದರ್ಭದಲ್ಲೇ ಗಿಡಗಳು ಹೂ ಬಿಡಲು ಆರಂಭಿಸಿದೆ. ಹೂ ಬಿಟ್ಟು ಫಲ ಸಿಗಲು 40 ದಿನಗಳು ಬೇಕು. ಎಪ್ರಿಲ್, ಮೇ ತಿಂಗಳನಿಲ್ಲಿ ಹೂ ಬಿಟ್ಟರೆ ಮುಂದಿನ ನವೆಂಬರ್ ತಿಂಗಳವರೆಗೂ ಇಳುವರಿಯನ್ನು ನೀಡುತ್ತದೆ. ಪ್ರತೀ 20 ದಿನಕ್ಕೊಮ್ಮೆ ಗಿಡ ಹೂ ಬಿಡುತ್ತದೆ

ಎನ್ನುತ್ತಾರೆ ಚಂದ್ರಹಾಸ ಶೆಟ್ಟಿ. ಗಿಡ ನಾಟಿ, ಸಿಮೆಂಟ್ ಕಂಬ ಅಳವಡಿಕೆ ಸೇರಿದಂತೆ ಒಂದು ಎಕರೆಗೆ ಏಳೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಕಲ್ಲಿನ ಕಂಬ, ಟಯರ್ ಹಾಕಿ ಕಡಿಮೆ ಕರ್ಚಿನಲ್ಲೂ ತೋಟ ಬೆಳೆಸಬಹುದಾಗಿದೆ. ಗಿಡದಿಂದ ಗಿಡಕ್ಕೆ 8 ರಿಂದ 9 ಅಡಿ, ಸಾಲಿಂದ ಸಾಲಿಗೆ 10 ರಿಂದ 11 ಅಡಿ ಅಂತರ ಬೇಕಾಗಿದ್ದು ಒಂದು ಕಂಬಕ್ಕೆ ನಾಲ್ಕು ಗಿಡಗಳನ್ನು ಹಾಕಬಹುದಾಗಿದೆ. ಗಿಡದಲ್ಲಿ ಮುಳ್ಳುಗಳು ಇರುವುದರಿಂದ ಪ್ರಾಣಿ ಪಕ್ಷಿಗಳ ಕಾಟ ಇಲ್ಲ, ರೋಗ ಬಾಧೆ ಕಡಿಮೆ, ಕಡಿಮೆ ನೀರು ಇರುವ ಜಾಗದಲ್ಲೂ ಉತ್ತಮವಾಗಿ ಬೆಳೆಸಬಹುದಾಗಿದೆ.

ಒಂದು ಹಣ್ಣು 750ಗ್ರಾಂ ತೂಕ ಬರುತ್ತದೆ. ಕಡಿಮೆ ತೂಕ ಬಂದರೂ ಆದಾಯ ಪಡೆಯಲು ಯಾವುದೇ ಮೋಸ ಇಲ. ಈವರೆಗೆ ಒಂದೂವರೆ ಟನ್ ಹಣ್ಣು ಸಿಕ್ಕಿದೆ ಎನ್ನುತ್ತಾರೆ ಚಂದ್ರಹಾಸ ಶೆಟ್ಟಿ. ಒಂದು ಎಕರೆಗೆ ಏಳು ಲಕ್ಷ ರೂಪಾಯಿ ಖರ್ಚಾಗಿದೆ, ಈವರೆಗೆ 3 ಲಕ್ಷ ರೂಪಾಯಿಯ ಹಣ್ಣು ಮಾರಿದ್ದೇನೆ, ಇನ್ನೂ ಮೂರು 4 ಲಕ್ಷ ರೂ.ವಿನ ಹಣ್ಣು ಸಿಗುವ ನಿರೀಕ್ಷೆ ಇದೆ. ಆದ್ದರಿಂದ ಹಾಕಿದ ಏಳೂವರೆ ಲಕ್ಷ ರೂಪಾಯಿ ಮೊದಲ ಬೆಳೆಯಲ್ಲೇ ಸಿಕ್ಕಂತಾಗಿದೆ. ಎಪ್ರಿಲ್ ತಿಂಗಳ ಅಂತ್ಯಕ್ಕೆ ಹೂ ಬಿಡಲು ಆರಂಭವಾಗಿ ನವೆಂಬರ್ ವರೆಗೆ ಹಣ್ಣು ಬಿಡುತ್ತದೆ. ಗಿಡವೊಂದಕ್ಕೆ 30 ವರ್ಷದ ಬಾಳಿಕೆ ಇದೆ, ವರ್ಷಕ್ಕೆ 2 ಬಾರಿ ಗೊಬ್ಬರ ಹಾಕಿ ಹುಲ್ಲು ಕಟಾವು ಮಾಡಿದರೆ ಗಿಡಗಳು ಸೊಂಪಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತದೆ.

ಸಾವಯವ ಗೊಬ್ಬರ ಬಳಕೆ:

ಚಂದ್ರಹಾಸ ಶೆಟ್ಟಿಯವರು ಡ್ರಾಗನ್ ಪ್ರೂಟ್ ಬೆಳೆಯಲು ಸಾವಯವ ಗೊಬ್ಬರಗಳನ್ನೇ ಬಳಸಿದ್ದಾರೆ. ಗಿಡ ನೆಡುವ ಸಂದರ್ಭದಲ್ಲಿ ಹಟ್ಟಿ ಗೊಬ್ಬರವನ್ನು ಬಳಸಿದ್ದಾರೆ. ಬಳಿಕ ಕುರಿಗೊಬ್ಬರ, ಕೋಳಿ ಗೊಬ್ಬರ, ಬೂದಿಯನ್ನು ಹಾಕಿರುವುದಾಗಿ ತಿಳಿಸಿದ್ದಾರೆ. ಒಂದು ಎಕರೆಯಲ್ಲಿ 500 ಕಂಬ ಹಾಕಬಹುದಾಗಿದೆ.

ಒಂದು ಕಂಬದಲ್ಲಿ ನಾಲ್ಕು ಗಿಡಗಳಂತೆ 2 ಎಕರೆಗೆ ಸಾವಿರ ಗಿಡಗಳನ್ನು ಬೆಳೆಸಬಹುದಾಗಿದೆ. ಇದೀಗ ಅವರ ಎರಡು ಎಕರೆ ತೋಟದಲ್ಲಿ 4 ಸಾವಿರ ಗಿಡಗಳಿವೆ. ಡ್ರ್ಯಾಗನ್ ಪ್ರೂಟ್ ಆರೋಗ್ಯ ವರ್ಧಕ ಹಣ್ಣು ಆಗಿದ್ದು ಯಥೇಚ್ಛ ವಿಠಮಿನ್ ಹೊಂದಿದೆ. ಈ ಕಾರಣಕ್ಕಾಗಿ ಬೆಳೆದ ಹಣ್ಣುಗಳಿಗೆ ಸ್ಥಳೀಯವಾಗಿಯೇ ಉತ್ತಮ ಮಾರುಕಟ್ಟೆಯೂ ಅವರಿಗೆ ಲಭ್ಯವಾಗಿದೆ. 35 ಬಗೆಯ ಡ್ಯಾಗನ್ ಪ್ರೂಟ್‍ಗಳಿದ್ದು ಚಂದ್ರಹಾಸ ಶೆಟ್ಟಿ ಹೆಚ್ಚು ರುಚಿಕರವಾದ ಪಿಂಕ್ ಬಣ್ಣದ ಡ್ರ್ಯಾಗನ್ ಪ್ರೂಟ್ ಬೆಳೆದಿದ್ದರೆ.

Related Posts

Leave a Reply

Your email address will not be published.