ಬಂಟ್ವಾಳ: ಡಿ.26ರಂದು ರೈತ ಸಂಘದಿಂದ ತುಂಬೆ ಡ್ಯಾಂ ಬಳಿ ಆಹೋರಾತ್ರಿ ಪ್ರತಿಭಟನೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದ ಬಲಪಾರ್ಶ್ವದಲ್ಲಿ ಡ್ಯಾಂನಿಂದ ಹರಿದು ಹೋಗುವ  ನೀರಿನ ರಭಸಕ್ಕೆ  ಸುಮಾರು 10 ಎಕರೆ ಯಷ್ಟು ವಿಸ್ತೀರ್ಣದ ಅಡಿಕೆ ತೋಟ, ತೆಂಗಿನ ತೋಟ, ಗದ್ದೆಗಳು ಕೊಚ್ಚಿಕೊಂಡು ಹೋಗಿ ಸ್ಥಳೀಯ ರೈತರಿಗೆ ನಷ್ಟ ಉಂಟಾದರೂ, ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಈ ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳದೆ ಭೂಮಿ ನದಿ ಪಾಲಾಗಲು ಸಹಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿಯ ಸಭೆಯಲ್ಲಿ ತಿರ್ಮಾನಿಸಿದಂತೆ ಡಿ. 26ರಂದು ತುಂಬೆ ಡ್ಯಾಂ ಬಳಿ ಇರುವ ನೀರು ಸರಬರಾಜು ಸ್ಥಾವರಕ್ಕೆ ಬೀಗ ಜಡಿದು ಆಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ. ಶ್ರೀಧರ ಶೆಟ್ಟಿ ಬೈಲುಗುತ್ತು ಎಚ್ಚರಿಸಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ತುಂಬೆ ಡ್ಯಾಂನ ಕೆಳಭಾಗದ ರೈತರು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಕಳೆದ ಒಂದು ವರ್ಷದಿಂದ ಮನಪಾದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರೂ ಇಂದು ಬಾ, ನಾಳೆ ಬಾ ಎನ್ನುವ ಧೋರಣೆಯಿಂದ ರೈತರನ್ನು ನಿರಂತರವಾಗಿ ಸತಾಯಿಸಿಕೊಂಡು ಬರುತ್ತಿದ್ದಾರೆ, 4 ತಿಂಗಳ ಹಿಂದೆ ಪರಿಹಾರ ನೀಡಿ, ನದಿ ಬದಿಗೆ ತಡೆಗೋಡೆ ನಿರ್ಮಿಸುವುದಾಗಿ ಹೇಳಿದ್ದರು, ಈಗ ನ್ಯಾಯಾಲಯದಿಂದ ನೋಟೀಸು ಜಾರಿಯಾದರೂ ಕೂಡ ಅವರ ಪತ್ತೆಯಿಲ್ಲ, ಆ ಕಾರಣಕ್ಕಾಗಿ ಅನಿವಾರ್ಯವಾಗಿ ಪಂಪ್ ಹೌಸ್ ಬಂದ್ ಮಾಡುವ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದರು.

ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್. ಇದ್ದಿನಬ್ಬ ಮಾತನಾಡಿ ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀಟರ್ ಮಾತ್ರ ನೀರು ನಿಲ್ಲಿಸಲು ಅನುಮತಿ ಇದೆ. ಆದರೆ ಕಳೆದ ಭಾನುವಾರ 7 ಮೀಟರ್ ನೀರು ನಿಲ್ಲಿಸಿದ್ದು ಇದರಿಂದ ನೇಜಿ ಹಾಕಿದ ಗದ್ದೆಗಳು, ಪೈರು ಕಟಾವು ಮಾಡದ ಗದ್ದೆಗಳು ಮುಳುಗಡೆಯಾಗಿ ರೈತರು ತೊಂದರೆ ಅನುಭವಿಸಿರುವುದಾಗಿ ಆರೋಪಿಸಿದರು.

ರೈತ ಸಂಘದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಮಾತನಾಡಿ  ತುಂಬೆ ವೆಂಟೆಡ್ ಡ್ಯಾಂನಿಂ ಮುಳುಗಡೆಯಾಗಿರುವ ಜಮೀನಿನ ಒರತೆ ಪ್ರದೇಶಕ್ಕೂ ನ್ಯಾಯೋಚಿತ ಪರಿಹಾರ ನೀಡಬೇಕು ಎನ್ನುವ ನಿಯಮವಿದ್ದರೂ ಕೂಡ 2016 ರಿಂದ ಈವರೆಗೆ ಯಾವುದೇ ರೈತರಿಗೆ ಒರತೆ ಪ್ರದೇಶಕ್ಕೆ ಪರಿಹಾರವನ್ನು ನೀಡಿಲ್ಲ, ಆದರೂ ಸರಕಾರಕ್ಕೆ ಪರಿಹಾರ ನೀಡಿರುವುದಾಗಿ ಅಧಿಕಾರಿಗಳು ಬೋಗಸ್ ವರದಿ ನೀಡಿದ್ದಾರೆ. 2004 ರಿಂದ ತುಂಬೆ ಡ್ಯಾಂನಿಂದ ರೈತರಿಗಾಗುತ್ತಿರುವ ಸಮಸ್ಯೆಯ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆದರೂ ಸ್ಪಂದನೆ ಸಿಕ್ಕಿಲ್ಲ, ರೈತರ ಮನವಿ ಅರಣ್ಯ ರೋಧನವಾಗುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಹೋರಾಟ ಸಮಿತಿಯ ಭಾಸ್ಕರ, ಆನಂದ ಶೆಟ್ಟಿ, ಮೊಯ್ದಿನಬ್ಬ, ಲೋಕಯ್ಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.