ಬಂಟ್ವಾಳ: ಕಾಮಾಜೆ ಸರ್ಕಾರಿ ಕಾಲೇಜಿನತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕಾರಿನಲ್ಲಿ ಸ್ಟಿಕ್ಕರ್ ಬರಹ

ಬಿ.ಸಿ.ರೋಡಿನ ಕಾಮಾಜೆಯಲ್ಲಿರುವ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ವೇದಶ್ರೀ ನಿಡ್ಯ ಅವರು ತನ್ನ ಸ್ವಂತ ಕಾರಿನಲ್ಲಿ ಹೀಗೊಂದು ಸ್ಟಿಕ್ಕರ್ ಬರಹವನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.


ಜನರು ತಮ್ಮ ಸ್ವಂತ ವಾಹನಗಳಲ್ಲಿ ತಮ್ಮ ಇಷ್ಟದ ದೇವರ ಹೆಸರು, ಮಕ್ಕಳ ಹೆಸರು ಅಥವಾ ಇಷ್ಟದ ವಾಕ್ಯಗಳನ್ನು ಸ್ಟಿಕರ್ ಮೂಲಕ ಬರೆಸುವುದು ಸಾಮಾನ್ಯ. ಆದರೆ ಉಪನ್ಯಾಸಕಿ ವೇದಶ್ರೀ ಅವರು ತನ್ನ ವೇಗನ್ ಆರ್ ಕಾರಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ತಾನು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ವಿದ್ಯಾಸಂಸೆಯ ಹೆಸರು ಬರೆದು ಪ್ರಚಾರ ನೀಡಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ನಡೆಸಿದ್ದಾರೆ.


2015ರಿಂದ ವೇದಶ್ರೀ ನಿಡ್ಯ ಅವರು ಬಂಟ್ವಾಳದ ಕಾಮಾಜೆಯಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರಭಾಗದಿಂದ ಸ್ವಲ್ವ ದೂರದಲ್ಲಿರುವ ತನ್ನ ವಿದ್ಯಾಸಂಸ್ಥೆಯ ಬಗ್ಗೆ ಜನರ ಸಾಮಾನ್ಯರಿಗೆ ತಿಳಿಯದೇ ಇರುವುದರಿಂದ 2017ರಲ್ಲಿ ಕಾಲೇಜಿನ ಬಗ್ಗೆ ತನ್ನ ಕಾರಿನಲ್ಲಿ ಸ್ಟಿಕ್ಕರ್ ಬರಹವನ್ನು ಹಾಕಿಸಿಕೊಂಡಿದ್ದರು. ಕಾರು ರಸ್ತೆಯಲ್ಲಿ ಹೋಗುವಾಗ, ಎಲ್ಲಾದರೂ ಪಾರ್ಕಿಂಗ್ ಮಾಡುವಾಗ ಜನರ ಗಮನ ಸೆಳೆಯುತ್ತದೆ. ಆ ಮೂಲಕ ತನ್ನ ವಿದ್ಯಾಸಂಸ್ಥೆಯನ್ನು ಜನರಿಗೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಣ್ಣ ಪ್ರಯತ್ನ ಅವರದ್ದಾಗಿತ್ತು. ಆ ಬಳಿಕ ಹೊಸ ಕಾರು ಕೊಂಡಾಗಲೂ ತಕ್ಷಣ ಅದರಲ್ಲೂ ವಿದ್ಯಾಸಂಸ್ಥೆಯ ಹೆಸರನ್ನು ಬರೆಸಿಕೊಂಡಿದ್ದಾರೆ.


ಮೂಲಸೌಕರ್ಯಗಳಿರುವ ಕಾಲೇಜು:
ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಬಿ+ ಗ್ರೇಡ್ ನೀಡಿದೆ. ಇಲ್ಲಿ ಬಿ.ಎ., ಬಿ.ಕಾಂ., ಎಂ.ಕಾಂ ತರಗತಿಗಳು ಇದ್ದು ಸುಸಜ್ಜಿತವಾದ ಕಟ್ಟಡವಿದೆ, ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿ ಸೌಲಭ್ಯವಿದೆ, ಎನ್‌ಇಪಿ 2020ರಂತೆ 3 ವರ್ಷಗಳ ಪದವಿ ಕೋರ್ಸ್ ಇದ್ದು ನುರಿತ ಪ್ರಾಧ್ಯಪಕರಿಂದ ಭೋದನೆ, ಗ್ರಂಥಾಲಯ ಸೌಲಭ್ಯ, ಕ್ರೀಡೆಗಳಿಗೆ ಪ್ರೋತ್ಸಾಹ, ತರಬೇತಿ, ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ, ಬಿಸಿ ಊಟದ ವ್ಯವಸ್ಥೆ ಇದೆ. ಈ ಬಗ್ಗೆ ಕರಪತ್ರ, ಬ್ಯಾನರ್‌ಗಳನ್ನು ಹಾಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಗೆ ಸೆಳೆಯುವ ಪ್ರಯತ್ನ ಪ್ರಾಂಶುಪಾಲರು ಹಾಗೂ ಉಪನ್ಯಾಸಕವರ್ಗದಿಂದ ಒಂದೆಡೆ ನಡೆಯುತ್ತಿದ್ದರೆ ತಮ್ಮ ಸ್ವಂತ ಕಾರಿನಲ್ಲೂ ಬರಹಗಳನ್ನು ಅಚ್ಚುಹಾಕಿಸಿ ಸರಕಾರಿ ಕಾಲೇಜಿನತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ.

Related Posts

Leave a Reply

Your email address will not be published.