ಬಂಟ್ವಾಳ: ಎಂಜಿನಿಯರಿಂಗ್ ವಿದ್ಯಾರ್ಥಿಯ ಯಕ್ಷ ಪಯಣ..!

ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಯಕ್ಷಗಾನದತ್ತ ಯುವ ಸಮುದಾಯ ಆಕರ್ಷಿತಗೊಳ್ಳುತ್ತಿದೆ. ಆದರೆ ಇಂತಹ ಶ್ರೇಷ್ಠ ಎಲ್ಲರಿಗೂ ಒಲಿಯವುದಿಲ್ಲ. ನಿರಂತರ ಅಭ್ಯಾಸ, ಅಧ್ಯಯನ ಶೀಲತೆ, ಕಲೆಯ ಮೇಲಿನ ಒಲುಮೆ, ಪ್ರೀತಿ, ಅಭಿಮಾನ ಆ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಮಾಡುತ್ತದೆ. ಬಂಟ್ವಾಳದ ಎಂಜಿನಿಯರ್ ವಿದ್ಯಾರ್ಥಿಯೋರ್ವನಿಗೆ ಯಕ್ಷಗಾನ ಕಲೆ ಒಲಿದಿದೆ.

ಬಾಲ್ಯದಿಂದಲೂ ಯಜ್ಷಗಾನದ ಮೇಲಿನ ಆಸಕ್ತಿ ಇಂದು ಈ ಕಲಾವಿದನನ್ನು ಯಕ್ಷ ಲೋಕದಲ್ಲಿ ಸಾಧನೆ ಮಾಡುವಂತೆ ಮಾಡಿದೆ. ಯಕ್ಷಗಾನದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಬಾಚಿಕೊಳ್ಳುತ್ತಾ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಪರಿಣತಿಯನ್ನು ಪಡೆದುಕೊಳ್ಳುತ್ತಿದ್ದಾನೆ. ಆತನೇ ಅನ್ವೇಶ್ ಆರ್. ತಾಂತ್ರಿಕ ಪದವಿ (ಇಂಜಿನೀಯರಿಂಗ್) ಶಿಕ್ಷಣದ ಜತೆ ಕಲೋಪಾಸನೆಯಲ್ಲಿ ತೊಡಗಿಸಿಕೊಂಡಿರುವ ಕೆಲವೇ ಮಂದಿ ವಿದ್ಯಾರ್ಥಿಗಳಲ್ಲಿ ಅನ್ವೇಷ್ ಆರ್.ಶೆಟ್ಟಿ ಓರ್ವರು.


ಯಕ್ಷಗಾನ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅನ್ವೇಷ್ ವಿದ್ಯಾರ್ಥಿ ಯಕ್ಷ ಸಾಧಕ. . ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ತನ್ನನ್ನು ಗುರುತಿಸಿಕೊಂಡು ಯಶಸ್ಸು ಪಡೆಯುತ್ತಿರುವುದು ಇವರ ಸಾಧನೆಯಾಗಿದೆ. ಮೂಲತ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಪತ್ರಕರ್ತ, ಕಲಾವಿದ ರತ್ನದೇವ್ ಶೆಟ್ಟಿ ಮತ್ತು ಶಿಕ್ಷಕಿ ಸುಜಾತಾ ದಂಪತಿಯ ಪುತ್ರ ಅನ್ವೇಷ್ ಎಳೆಯ ವಯಸ್ಸಿನಿಂದಲೆ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದರು. ಎಲ್ಲೆಲ್ಲೋ ತಿರುಗಿ ಯಕ್ಷಗಾನದ ಕುಣಿತ ಅಭ್ಯಸಿಸಿ ಹತ್ತಾರು ವೇದಿಕೆಗಳಲ್ಲಿ ತನ್ನ ಪ್ರತಿಭೆ ತೋರ್ಪಡಿಸಿದ್ದರು. ತನ್ನ ಏಳನೇ ವರ್ಷದಲ್ಲಿ ಬಣ್ಣ ಹಚ್ಚಿದ ಇವರು ಬಾಲಕಲಾವಿದನಾಗಿ ಬಳಿಕ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸುವ ಅವಕಾಶ ಪಡೆದಿದ್ದರು. ಪ್ರಸ್ತುತ ಇಪ್ಪತ್ತೊಂದು ವರ್ಷಕ್ಕೆ ಕಾಲಿರಿಸಿದ ಇವರು ನೂರಾರು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಯಕ್ಷಗಾನ ಕಲೆಯಲ್ಲಿ ಅಭಿರುಚಿ ಹೊಂದಿ ಮುಂದಿನ ಪೀಳಿಗೆಯ ಯಕ್ಷಗಾನ ಕಲಾವಿದನಾಗಿ ರೂಪುಗೊಳ್ಳುವುದರ ಜತೆ ಯಕ್ಷಗಾನದ ಮೂಲಕ ತನ್ನ ಆದಾಯವನ್ನು ಕಂಡುಕೊಂಡು ಸ್ವಾಭಿಮಾನದ ಬದುಕಿಗೆ ಇತರರಿಗೆ ಮಾದರಿಯಾಗಿರುವ ಇವರಿಗೆ ಅರ್ಹವಾಗಿಯೇ ಈ ಬಾರಿಯ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ.

Related Posts

Leave a Reply

Your email address will not be published.