ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಇ-ಲಿಟ್ ಫೆಸ್ಟ್

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿರುವ ವಿಮರ್ಶಕರ ಪೈಕಿ ಹೆಚ್ಚಿನವರು ಇಂಗ್ಲಿಷ್ ಭಾಷೆಯಿಂದ ಬಂದವರು, ಇವರೆಲ್ಲಾ ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಎಸ್. ಡಿ.ಎಂ. ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕÀ ಡಾ. ರಾಜಶೇಖರ ಹಳೆಮನೆ ಅಭಿಪ್ರಾಯ ವ್ಯಕ್ತಪಡಿಸಿದರು.
ಉಜಿರೆ ಶ್ರೀ. ಧ. ಮಂ. ಸ್ನಾತಕೊತ್ತರ ಕೇಂದ್ರದ ಇಂಗ್ಲಿಷ್ ವಿಭಾಗದಿಂದ ಆಯೋಜಿಸಿದ್ದ ಇ-ಲಿಟ್ ಫೆಸ್ಟ್‍ನ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಲೋಕಕ್ಕೆ ಯು.ಆರ್.ಅನಂತಮೂರ್ತಿ, ಕೀರ್ತಿನಾಥ ಕುರ್ತಕೋಟಿ, ಗಿರಡ್ಡಿ ಗೋವಿಂದರಾಜು, ಜಿ.ಎಸ್.ಆಮೂರ ಇವೆರೆಲ್ಲರೂ ಇಂಗ್ಲಿಷ್ ಭಾಷೆಯನ್ನು ಅಧ್ಯಯನ ಮಾಡಿದ್ದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅದ್ಭುತ ಛಾಪನ್ನು ಮೂಡಿಸಿದ್ದಾರೆ. ಇದಷ್ಟೇ ಅಲ್ಲದೆ ಕುವೆಂಪು ಭಾಷಾ ಪ್ರಾಧಿಕಾರದಿಂದ ಭಾಷಾಂತರಕ್ಕಾಗಿ ಹಲವಾರು ಅವಕಾಶಗಳು ತೆರೆದಿವೆ, ಭಾಷಾ ಅಧ್ಯಯನಕಾರರಾದವರು ಸಾಹಿತ್ಯದ ಈ ವಿಭಾಗದತ್ತವೂ ಗಮನ ಹರಿಸಬಹುದು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಜೊತೆಗೆ ಕಲಿಯುವಂತಹ ಇತರೆ ಕೌಶಲ್ಯಗಳೊಂದಿಗೆ ವರ್ತನೆಯೂ ಅಷ್ಟೇ ಮಹತ್ವದ್ದಾಗಿರುತ್ತದೆ ಎಂದರು. ಪಠ್ಯದ ಹೊರತಾಗಿನ ಇತರೆ ಸಾಹಿತ್ಯದ ಓದು ಜ್ಞಾನದ ಅಭಿವೃದ್ಧಿಗೆ ಸಹಾಯಕಾರಿ, ಸಾಹಿತ್ಯದ ಯಾವುದಾದರೊಂದು ಪ್ರಕಾರಕ್ಕೆ ನೀವು ಕೊಡುಗೆ ನೀಡುವ ಮೂಲಕ ಆ ಕ್ಷೇತ್ರದ ವಿಸ್ತರಣೆಗೆ ಸಹಾಯಕಾರಿಯಾಗಬೇಕು ಎಂದು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಮಾತನಾಡಿದರು. ಪಠ್ಯದಲ್ಲಿ ಪಠ್ಯೇತರ ಚಟುವಟಿಕೆಗಳು ಕೂಡಾ ಒಂದು ಭಾಗವಾಗಿರಬೇಕು, ಆಗ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಹಾಗೂ ಕೌಶಲ್ಯವನ್ನು ಪಡೆದುಕೊಳ್ಳುತ್ತಾರೆ. ಪ್ರಸ್ತುತ ಉದ್ಯೋಗದ ಜಗತ್ತು ಕೂಡ ವಿಭನ್ನರಾಗಿ ಆಲೋಚಿಸುವವರಿಗೆ ಆದ್ಯತೆ ನೀಡುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ನೆಲೆಯಲ್ಲಿ ಸಾಗಬೇಕು ಎಂದರು.
ಇ- ಲಿಟ್ ಫೆಸ್ಟ್ ಒಟ್ಟು 5 ಸ್ಪರ್ಧೆಗಳನ್ನು ಒಳಗೊಂಡಿತ್ತು ಮತ್ತು ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಡಾ.ಕೆ. ಶಂಕರನಾರಾಯಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆದಿರಾ ಸ್ವಾಗತಿಸಿ, ವಂದಿಸಿದರು. ಜಿಮ್ಸಿ ಥಾಮಸ್ ನಿರೂಪಿಸಿದರು.