ಡಿಸೆಂಬರ್ 20 ರ ವೇಳೆಗೆ ಪಿಂಚಣಿ ಬೇಡಿಕೆ ಈಡೇರದಿದ್ದರೆ ಶಾಲಾ-ಕಾಲೇಜು ಬಂದ್ ಮಾಡಿ ತೀವ್ರ ಹೋರಾಟ – ಪಿಂಚಣಿ ವಂಚಿತ ನೌಕರರ ಸಂಘದಿಂದ ಎಚ್ಚರಿಕೆ

ಬೆಂಗಳೂರು, ಅ, 17; ಅನುದಾನಿತ ಶಾಲೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ನಿಶ್ಚಿತ ಪಿಂಚಣಿ, ಕಾಲ್ಪನಿಕ ವೇತನ , ಅನುದಾನಿತ ನೌಕರರಿಗೆ ಆರೋಗ್ಯ ಸಂಜೀವಿನಿ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಿಂಚಣಿ ವಂಚಿತ ನೌಕರರ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹ 11 ದಿನಕ್ಕೆ ಕಾಲಿಟ್ಟಿದೆ.

ಪಾದಯಾತ್ರೆ, ಅರೆಬೆತ್ತಲೆ ಪ್ರತಿಭಟನೆ, ರಕ್ತದಾನ ಮತ್ತಿತರ ವಿಧಾನಗಳ ಮೂಲಕ ಹೋರಾಟ ನಡೆಸಿರುವ ಸಂಘದ ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.

ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ 2006 ರ ಏಪ್ರಿಲ್ ನಂತರ ನೇಮಕಗೊಂಡು ನಂತರ ಅನುದಾನಕ್ಕೊಳಪಟ್ಟು ವೇತನ ಪಡೆಯುತ್ತಿರುವ ನೌಕರರಿಗೆ ಯಾವುದೇ ರೀತಿಯಲ್ಲಿ ಪಿಂಚಣಿ ಸೌಲಭ್ಯ ಇಲ್ಲ. ಎನ್.ಪಿ.ಎಸ್ ಅಥವಾ ಓ.ಪಿ.ಎಸ್ ಪಿಂಚಣಿಗಳಲ್ಲಿ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಪಿಂಚಣಿ ಇಲ್ಲದೇ 3000ಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ. ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣಹೊಂದಿದ್ದಾರೆ, ಇವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆತಿಲ್ಲ. ಇದು ಸರ್ಕಾರದ ಅಮಾಯಕ ವರ್ತನೆಗ ಸಾಕ್ಷಿಯಾಗಿದೆ ಎಂದು ಹೇಳಿದರು.

ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು, ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನೀಡಿದ್ದರೂ ಸಹ ಸರ್ಕಾರ ಬೇಡಿಕೆ ಈಡೇರಿಸಿಲ್ಲ. ದೇಶದಲ್ಲಿ ಎಲ್ಲಿಯೂ ಇಲ್ಲದೆ, ಕೇವಲ ಕರ್ನಾಟಕದಲ್ಲಿ ಮಾತ್ರ ಈ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಮತ್ತೊಂದು ದುರಂತ. ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಅನುದಾನಿತ ಸಂಸ್ಥೆಗಳ ನೌಕರರಿಗೆ ಪಿಂಚಣಿ ನೀಡುತ್ತಿವೆ. ರಾಜ್ಯ ಸರ್ಕಾರ 6 ನೇ ವೇತನ ಆಯೋಗ ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಇತ್ತೀಚೆಗೆ ಸ್ವಾಯತ್ತ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನೌಕರರಿಗೆ ಪಿಂಚಣಿ ಜಾರಿಗೊಳಿಸಲಾಗಿದೆ ಎಂದರು.

ಎನ್.ಪಿ.ಎಸ್ ಜಾರಿಗೂ ಮುನ್ನ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ತದನಂತರ ನೇಮಕವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ನೀಡಲಾಗಿದೆ. ಆದರೆ 2006 ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಅನುದಾನಿತ ನೌಕರರಿಗೆ ತಾರತಮ್ಯ ಮಾಡಲಾಗಿದೆ. ಪಿಂಚಣಿ ವಂಚಿತರಾಗಿ ನಿವೃತ್ತರಾಗಿರುವ ನೌಕರರು ವಯೋಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದು, ಪಿಂಚಣಿ ಇಲ್ಲದೇ ಪರಿತಪಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಎಷ್ಟೇ ಹೋರಾಟಗಳನ್ನೂ ಮಾಡಿದರೂ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಿಲ್ಲ. ಅನೇಕ ರೀತಿಯ ಹೋರಾಟದ ನಂತರ ಫ್ರೀಡಂ ಪಾರ್ಕ್ ನಲ್ಲಿ “ಅನಿರ್ದಿಷ್ಟಾವಧಿ ಮುಷ್ಕರ” ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ನಮ್ಮ ಬೇಡಿಕೆ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರಿದರೆ ಬರುವ ಡಿಸೆಂಬರ್ 20 ಕ್ಕೆ ನಮ್ಮಧರಣಿ ಸತ್ಯಾಗ್ರಹ ಹೋರಾಟ 75 ನೇ ದಿನ ತಲುಪಲಿದೆ. ಅಂದಿನಿಂದ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ರಾಜ್ಯದ್ಯಾಂತ ಇರುವ ಎಲ್ಲ ಅನುದಾನಿತ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಕುಟುಂಬ ಸಮೇತ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತುರಾಜ ಮತ್ತಿಕೊಪ್ಪ. ರಾಜ್ಯ ಕಾರ್ಯಾಧ್ಯಕ್ಷ ಶಶಿಧರ ಸಿ.ಎಂ. ರಾಜ್ಯ ಉಪಾಧ್ಯಕ್ಷ ಬಿ.ಎಸ್ ಉಮೇಶ್, ಜಾಲ ಮಂಗಲ ನಾಗರಾಜ, ಮಂಜುನಾಥ ಬತ್ತದ, ದುರ್ಗಯ್ಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.