ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ: ಪವಿತ್ರ ಪಲ್ಲಪೂಜೆ
ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ನಿಮಿತ್ತ ಕಾರ್ತಿಕ ಶುದ್ಧ ಚೌತಿಯಂದು ಪವಿತ್ರ ಪಲ್ಲಪೂಜೆ, ಮಂಗಳವಾರ ಮತ್ತು ಬುಧವಾರ ಎಳೆಯಲಿರುವ ಪಂಚಮಿ ರಥ ಹಾಗೂ ಬ್ರಹ್ಮರಥಗಳ ಶಿಖರ (ಕಳಶ) ಪೂಜೆ, ಎಡೆಸ್ನಾನ ಪೂಜಾ ವಿಧಿವಿಧಾನಗಳು ನಡೆದವು. ಬೆಳಗ್ಗೆ ದೇವಸ್ಥಾನದ ಒಳಾಂಗಣದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿ ತಾಯರು ವಿಧಿವಿಧಾನಗಳಿಂದ ಪಲ್ಲಪೂಜೆ ನೆರವೇರಿಸಿದರು. ಬಳಿಕ ಅಕ್ಷಯಪಾತ್ರೆಗೆ ಪೂಜೆ ಸಲ್ಲಿಸಿ, ಜಾತ್ರಾ ಸಂದರ್ಭದಲ್ಲಿ ನಡೆಯುವ ನಿರಂತರ ಅನ್ನದಾನದ ಸಂಕೇತವನ್ನು ಗೌರವಿಸಿದರು. ಕುಕ್ಕೆಯಲ್ಲಿ ವರ್ಷಪೂರ್ತಿ ಅನ್ನದಾನ, ನೈವೇದ್ಯ ಪ್ರಸಾದ ಪ್ರಮುಖವಾಗಿದ್ದು, ಜಾತ್ರಾ ಕಾಲದಲ್ಲಿ ಇದು ವಿಶೇಷ ವೈಶಿಷ್ಟ÷್ಯವನ್ನು ಪಡೆದುಕೊಳ್ಳುತ್ತದೆ.
ಮಧ್ಯಾಹ್ನ ಪುರೋಹಿತ ಪ್ರಸನ್ನ ಹೊಳ್ಳ ಅವರು ಅಂಗಡಿಗುಡ್ಡೆಯಲ್ಲಿ ನಿರ್ಮಿಸಲಾದ ನೂತನ, ವಿಶಾಲ ಭೋಜನಶಾಲೆಯಲ್ಲಿ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು. ಇಲ್ಲಿ ಮುಂದಿನ ಮೂರು ದಿನಗಳ ಕಾಲ ಭಕ್ತರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಭೋಜನಶಾಲೆಯ ಚಟುವಟಿಕೆಗಳಿಗೆ ಭಕ್ತರಿಂದ ಉತ್ತಮ ಸ್ಪಂದನೆ ದೊರೆತಿದೆ. ಜಾತ್ರಾ ದಿನಗಳ ಪ್ರಮುಖ ಆಕರ್ಷಣೆಯಾದ ಮಂಗಳವಾರ ರಾತ್ರಿ ಎಳೆಯುವ ಪಂಚಮಿ ರಥ ಹಾಗೂ ಬುಧವಾರ ಬೆಳಗ್ಗೆ ಎಳೆಯುವ ಬ್ರಹ್ಮರಥಗಳಿಗೆ ಜೋಡಿಸಲಾಗುವ ಶಿಖರ (ಕಳಶ) ಪೂಜೆಯನ್ನು ಸೋಮವಾರ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲುರಾಯರು ನೆರವೇರಿಸಿದರು. ಬಳಿಕ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ್ ಅವರಿಗೆ ಕಳಶ ಜೋಡಣೆಗಾಗಿ ಪ್ರಸಾದ ವಿತರಿಸಲಾಯಿತು.
ಪಲ್ಲಪೂಜೆ, ಶಿಖರ ಪೂಜೆ ಮತ್ತು ಎಡೆಸ್ನಾನದ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ವೃಂದದವರು, ಪಂಡಿತರು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು, ಮಲೆಕುಡಿಯ ಜನಾಂಗದ ಮುಖಂಡರು ಹಾಗೂ ಅನೇಕ ಭಕ್ತರು ಮತ್ತಿತರರು ಉಪಸ್ಥಿತರಿದ್ದರು.


















