ಅವ ಬಿಡ ಇವ ಕೊಡ
ಬಿಜೆಪಿಯ ಮಾಜೀ ಶಾಸಕ ಗೂಳಿಹಟ್ಟಿ ಶೇಖರ್ ಅವರು ನಾಗಪುರದ ಸಂಘ ಕೇಂದ್ರದ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ದಲಿತ ಎಂದು ನನಗೆ ಪ್ರವೇಶ ಕೊಡಲಿಲ್ಲ ಎಂದು ದೂರಿದ್ದಾರೆ. ಅದೇ ಸಮಯದಲ್ಲಿ ಚುನಾವಣೆ ನಡೆದ ರಾಜ್ಯಗಳಲ್ಲಿ ಹೆಚ್ಚು ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವುದು ವರದಿಯಾಗಿದೆ. ಇವೆಲ್ಲ ಒಳ ವೈರುಧ್ಯದ ವಿಷಯಗಳು.
ಇದಕ್ಕೆ ಸಂವಾದಿಯಾಗಿ ಬಿಜೆಪಿ ಆಡಳಿತದಲ್ಲಿ ಮಹಿಳೆಯರು ಮತ್ತು ದಲಿತರ ಮೇಲೆ ಹಲ್ಲೆ ಹೆಚ್ಚಾಗಿರುವುದಾಗಿಯೂ ವರದಿಯಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸಗಡದಲ್ಲಿ ಮಹಿಳೆಯರು ಹೆಚ್ಚಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದೂ ವರದಿಯಾಗಿದೆ. ಈಗ ತೆಲಂಗಾಣದ ಉಪ ಮುಖ್ಯಮಂತ್ರಿಯಾಗಿ ದಲಿತರಾದ ಮಲ್ಲು ಭಟ್ಟಿ ವಿಕ್ರಮಾರ್ಕ ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತವು ಮೊದಲ ದಲಿತ ಮುಖ್ಯಮಂತ್ರಿಯನ್ನು ಕಂಡುದು ಅವಿಭಜಿತ ಆಂಧ್ರ ಪ್ರದೇಶದಲ್ಲಿ. ದಾಮೋದರಂ ಸಂಜೀವಯ್ಯ 1960- 62ರ ನಡುವೆ ಮುಖ್ಯಮಂತ್ರಿ ಆಗಿದ್ದರು.
ಇವಕ್ಕೆಲ್ಲ ನೇರ ಸಂಬಂಧ ಇಲ್ಲದಿದ್ದರೂ ಒಂದು ಕಡೆ ಶೋಷಣೆ, ಇನ್ನೊಂದು ಕಡೆ ಬೆಣ್ಣೆ ಹಚ್ಚುವಿಕೆ ದಲಿತರಿಗೆ ಮಾತ್ರವಲ್ಲ, ಅತಿ ಹಿಂದುಳಿದ ಜಾತಿಗಳವರಿಗೂ ಈ ದೇಶದಲ್ಲಿ ಸಂದಿರುವ ಉಡುಗೊರೆ ಆಗಿದೆ. ವೇದ ಕಾಲದಲ್ಲೇ ಮಹಿಳಾ ರಿಷಿ ಗಾರ್ಗಿಗೆ ಯಾಜ್ಞವಲ್ಕ್ಯನು ಪ್ರಶ್ನಿಸಿದರೆ ತಲೆ ತೆಗೆಯುವೆ ಎಂದಿದ್ದ. ಇದು ಜನಕ ರಾಜನ ಆಸ್ಥಾನದಲ್ಲೇ ನಡೆಯಿತು. ಮಹಿಳಾ ಶೋಷಣೆಯ ಆಗಿನ ಅಧಿಕೃತ ದಾಖಲೆ ಇದು.
ತೆಲಂಗಾಣವು ಹೈದರಾಬಾದ್ ಸಂಸ್ಥಾನ ಆಗಿತ್ತು. 1945ರಿಂದಲೇ ಕಮ್ಯುನಿಸ್ಟರು ಇಲ್ಲಿ ಕೂಲಿ ಕಾರ್ಮಿಕರ ಪರವಾಗಿ ಜಮೀನುದಾರರ ವಿರುದ್ಧ ಹೋರಾಟ ನಡೆಸತೊಡಗಿದ್ದರು. 1956ರ ಭಾಷಾವಾರು ಪ್ರಾಂತ್ಯ ರಚನೆಯ ವೇಳೆ ಹೈದರಾಬಾದ್ ಪ್ರದೇಶವು ದೇಶದ ಮೊದಲ ಭಾಷಾವಾರು ರಾಜ್ಯ ಆಂಧ್ರದಲ್ಲಿ ಸೇರಿತು. ಈಗ ಕಲ್ಯಾಣ ಕರ್ನಾಟಕ ಎನಿಸಿರುವ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಕರ್ನಾಟಕ ರಾಜ್ಯದ ಭಾಗಗಳಾದವು. 1969ರಲ್ಲಿ ಪ್ರತ್ಯೇಕ ತೆಲಂಗಾಣದ ಕೂಗು ಎದ್ದಾಗ ಕಾಂಗ್ರೆಸ್ ನಿರಾಕರಿಸಿತು. ಎಂ. ಚೆನ್ನಾರೆಡ್ಡಿಯವರು ಕಾಂಗ್ರೆಸ್ ಬಿಟ್ಟು ತೆಲಂಗಾಣ ಪ್ರಜಾ ಸಮಿತಿ ರಚಿಸಿದರು. ನಟಿ ವಿಜಯಶಾಂತಿ ಸಹಿತ ಹಲವರ ಹೋರಾಟದ ಬಳಿಕ 2014ರಲ್ಲಿ ತೆಲಂಗಾಣ ಹುಟ್ಟಿತು. ಮೊದಲ ಅನುಕೂಲ ತೆಲಂಗಾಣ ರಾಜ್ಯ ಸಮಿತಿಯ ಚಂದ್ರಶೇಖರ ರಾವ್ ಬಣಕ್ಕೆ ಆಯಿತು.
ಆರೆಸ್ಸೆಸ್ ಮುಖ್ಯಸ್ಥರಾಗಿ ಎಲ್ಲರೂ ಬ್ರಾಹ್ಮಣರೇ ಇದ್ದರು, ಇರುವರು ಎಂಬುದನ್ನು ತಿಳಿಯಲು ಯಾವ ಸಂಶೋಧನೆಯ ಅಗತ್ಯವಿಲ್ಲ. ನಾಗಪುರದಲ್ಲೇ ಬಾಬಾ ಸಾಹೇಬ್ ಅಂಬೇಡ್ಕರ್‍ರ ದೀಕ್ಷಾ ಭೂಮಿ ಇದೆ. ಇದನ್ನು ಕಾಕತಾಳೀಯ ಎಂದು ಹೇಳಬಹುದು ಎಂದರೂ ಸ್ಪಷ್ಟನೆ ಕಷ್ಟ. ಆರೆಸ್ಸೆಸ್‍ನವರು ಬ್ರಿಟಿಷ್ ಪೆÇೀಲೀಸರ ಚಡ್ಡಿ, ಲಾಠಿಯೊಡನೆ ತಿರುಗಿದ್ದು ಸಹ ಸಂಶೋಧನೆ ಮಾಡದೆಯೇ ತಿಳಿದಿರುವ ವಿಷಯವಾಗಿದೆ. ಅವರಿಗೆ ಸ್ವಾತಂತ್ರ್ಯ ಹೋರಾಟ ವಿವರಿಸಲು ಕಮ್ಯೂನಿಸ್ಟ್ ಭಗತ್ ಸಿಂಗ್, ಕಾಂಗ್ರೆಸ್ಸಿನ ಸುಭಾಷ್ ಚಂದ್ರ ಬೋಸ್, ಮಾಂಸಾಹಾರಿ ವಿವೇಕಾನಂದ ಮೊದಲಾದವರು ಬೇಕು.
ಸಾವರ್ಕರ್‍ರು ವೇದ ಕಾಲದಲ್ಲೇ ಜಾನುವಾರು ಮಾಂಸ ಬಳಸುತಿದ್ದುದ್ದನ್ನು ಬರೆದಿದ್ದರು.
ಜನಾಂಗೀಯ ಲಾಭದ ಹೊರತು ಅವರು ಬೇರೆ ತಿಳಿದಿಲ್ಲ. ಅವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸಹಾಯಕವಾಗುವ ಜಾತಿ ಗಣತಿ ಬೇಕಿಲ್ಲ. ಚುನಾವಣೆ ನಡೆದ ರಾಜ್ಯಗಳ ಮತದಾರರೂ ಸಂಘ ಮತ್ತು ಬಿಜೆಪಿ ವಾದ ಒಪ್ಪಿ ಮತ ಹಾಕಿದ್ದಾರೆ. ಹಾಗಿದ್ದ ಮೇಲೆ ಒಳಗೆ ಬಿಡಲಿಲ್ಲ ಎನ್ನುವುದಕ್ಕಿಂತ ಅಲ್ಲಿಗೆ ಹೋದದ್ದು ಏಕೆ ಎನ್ನುವ ಪ್ರಶ್ನೆ ಏಳುತ್ತದೆ.
ದಲಿತರು, ಮತ್ತು ಅತಿ ಹಿಂದುಳಿದ ಜಾತಿಗಳವರು ಬಿಡಿ. ಬಲಾಢ್ಯ ಜಾತಿ ಎನ್ನಲಾದ ಬಂಟರನ್ನು ಉಡುಪಿ ಬ್ರಾಹ್ಮಣರು ಎರಡು ಬಾರಿ ಊಟಕ್ಕೆ ಕುಳಿತಾಗ ಎಬ್ಬಿಸಿದ ಘಟನೆ ನಡೆದಿದೆ. ಕರಾವಳಿಯ ಬಿರುವ, ಬಂಟ ಮೊದಲಾದವರು ಸಂಘಕ್ಕಾಗಿ ಬಳ್ಳಾರಿ ಜೈಲಿಗೆ ಹೋದುದೂ ಆಗಿದೆ. ಕೃಷ್ಣನಲ್ಲಿ ಊಟ ಇಲ್ಲ; ಜೈಲು ಊಟ ಗ್ಯಾರಂಟಿ ಇದು ಸಂಘದ ಪ್ರಮುಖ ಕೊಡುಗೆ.
ಭಟ್ಟಿ ವಿಕ್ರಮಾರ್ಕ ಅರೆ ಚಾರಿತ್ರಿಕ ಹೆಸರು. ಮಂತ್ರಿಯಾಗಿ ಪ್ರಸಿದ್ಧ ಹೆಸರು. ಬಿಜೆಪಿಯವರು ದಲಿತ ಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ಸಿಗರನ್ನು ಕಿಚಾಯಿಸುವುದು. ಆರೆಸ್ಸೆಸ್‍ಗೆ ದಲಿತ ಅಧ್ಯಕ್ಷ ಮಾಡಿ ಎಂದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಳಿದ್ದಾರೆ. ಮೊದಲು ಅವರು ಬ್ರಾಹ್ಮಣರಲ್ಲದ ಯಾರನ್ನಾದರೂ ಅಧ್ಯಕ್ಷ ಮಾಡಲಿ, ಆಮೇಲೆ ನೋಡೋಣ.