ಸಾವಿರಾರು ಕಟ್ಟಡ ಕಾರ್ಮಿಕರಿಂದ ಕಲ್ಯಾಣ ಮಂಡಳಿ ಮುತ್ತಿಗೆ

ಶೈಕ್ಷಣಿಕ ಸಹಾಯಧನ ಕಡಿತ ವಿರೋಧಿಸಿ ಹಾಗೂ ವೈದ್ಯಕೀಯ ತಪಾಸಣೆ ಯೋಜನೆ ಕೈಬಿಡಲು ಒತ್ತಾಯಿಸಿ ಬುಧವಾರ ನೂರಾರು ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯು ನೋಂದಾಯಿತ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವ ಕಲಿಕಾ ಭಾಗ್ಯ ಯೋಜನೆಯನ್ನು ದುರ್ಬಲಗೊಳಿಸಿರುವುದು ನೋವಿನ ಸಂಗತಿ. ಶೈಕ್ಷಣಿಕ ಸಹಾಯಧನವನ್ನು ಶೇಕಡ 75ರಷ್ಟು ಹಣವನ್ನು ಕಡಿತ ಮಾಡಲಾಗಿದೆ. ಮಂಡಳಿಯ ಈ ತೀರ್ಮಾನದಿಂದಾಗಿ ಸಾವಿರಾರು ಬಡ ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತರಾಗುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು. ಕಡಿತ ಮಾಡಿರುವ ಆದೇಶವನ್ನು ವಾಪಸ್ ಪಡೆದು, ಈ ಹಿಂದಿನ ಆದೇಶದಂತೆ ಸಹಾಯಧನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.


‘ಶೈಕ್ಷಣಿಕ ಸಹಾಯಧನ ಕಡಿತಕ್ಕೆ ಕಲ್ಯಾಣ ಮಂಡಳಿಯಲ್ಲಿ ಹಣದ ಕೊರತೆ ಇದೆ ಹಾಗೂ ನಕಲಿ ಕಾರ್ಡುಗಳ ಹಾವಳಿಯಿಂದಾಗಿ ಮಂಡಳಿಯ ನಿಧಿಯ ದುರುಪಯೋಗವಾಗುತ್ತಿದೆ’ ಎಂಬ ಕಾರಣಗಳನ್ನು ಮುಂದುಮಾಡಿ, ಸಹಾಯಧನವನ್ನು ಕಡಿತ ಮಾಡಲಾಗಿದೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ವಿದ್ಯಾಭ್ಯಾಸದಂತಹ ಅತ್ಯಂತ ಮಹತ್ವದ ಉದ್ದೇಶಕ್ಕೆ ಈ ಮೇಲಿನ ಕಾರಣಗಳು ಅಡ್ಡಿಯಾಗಬಾರದಿತ್ತು. ಶಿಕ್ಷಣ ವ್ಯಾಪಾರೀಕರಣಗೊಂಡಿರುವ ಈ ದಿನಗಳಲ್ಲಿ ಬಡ ಕಾರ್ಮಿಕರಿಗೆ ಮಕ್ಕಳ ಶಿಕ್ಷಣ ಎಂಬುದು ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಶೈಕ್ಷಣಿಕ ಸಹಾಯಧನವು ಕಾರ್ಮಿಕರಿಗೆ ಆಸರೆ ನೀಡಿರುವ ಬಹುಮುಖ್ಯ ಸೌಲಭ್ಯದಿಂದ ವಂಚಿತರನ್ನಾಗಿ ಸರಿಯಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದರು.

‘ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಇತ್ತೀಚೆಗೆ ಲ್ಯಾಪ್‌ಟ್ಯಾಪ್ ಖರೀದಿಸಲಾಗಿದೆ. ಶೈಕ್ಷಣಿಕ ಸಹಾಯಧನ ಕೊಡಲು ಹಣದ ಕೊರತೆ ಇದೆ ಎಂಬ ಕಾರಣವನ್ನು ನೀಡುವಾಗಲೇ, ಲ್ಯಾಪ್‌ಟಾಪ್‌ಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿರುವುದು, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಮೂಲಕ ಕಾರ್ಮಿಕರ ನಿಧಿಯನ್ನು ದುರುಪಯೋಗ ಮಾಡಲಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಬಾಲಕೃಷ್ಣಶೆಟ್ಟಿ ಆರೋಪಿಸಿದರು.


‘ಹಿಂದಿನ ಅವಧಿಯಲ್ಲಿ ಖರೀದಿ ವ್ಯವಹಾರಗಳ ಮೂಲಕ ಕಲ್ಯಾಣ ಮಂಡಳಿಯ ಸಾವಿರಾರು ಕೋಟಿ ರೂಪಾಯಿಗಳನ್ನು ದುರುಪಯೋಗ ಮಾಡಲಾಗಿತ್ತು. ಈ ವಿಚಾರವಾಗಿ ಹೊಸ ಸರ್ಕಾರವು ತನಿಖೆ ಮಾಡಬಹುದೆಂಬ ನಮ್ಮ ನಿರೀಕ್ಷೆಯು ಹುಸಿಯಾಗಿದೆ. ಜತೆಗೆ ಈಗಿನ ಮಂಡಳಿಯ ತೀರ್ಮಾನಗಳು ಹಿಂದಿನ ಮಂಡಳಿಯ ಹಾದಿಯಲ್ಲೇ ಸಾಗುತ್ತಿರುವುದು ಕಟ್ಟಡ ಕಾರ್ಮಿಕರ ಕಾಯ್ದೆ ರಚನೆಯ ಹಿಂದಿರುವ ಸದುದ್ದೇಶವನ್ನು ಬುಡಮೇಲು ಮಾಡುವ ಈ ಪ್ರಯತ್ನವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು ಜತೆಗೆ ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ’ ಎಂದರು.

ನೋಂದಾಯಿತ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ಯೋಜನೆಗೆ ಕಾರ್ಯಾದೇಶ ನೀಡಿರುವುದು ಸರಿಯಲ್ಲ, ಇದು ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗದ ನಿರುಪಯುಕ್ತ ಯೋಜನೆಯಾಗಿದ್ದು, ಖಾಸಗಿ ಆಸ್ಪತ್ರೆಗಳ ಜತೆ ಶಾಮೀಲಾಗಿ ಈ ಯೋಜನೆ ರೂಪಿಸಲಾಗಿದ್ದು, ನೂರಾರು ಕೋಟಿ ಹಣ ದುರುಪಯೋಗ ಮಾಡಲು ಈ ಯೋಜನೆ ರೂಪಿಸಲಾಗಿದೆ’ ಎಂದು ಐಎನ್‌ಟಿಸಿಯು ರಾಜ್ಯ ಮುಖಂಡ ಶಾಮಣ್ಣರೆಡ್ಡಿ ಆರೋಪಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಆರೋಗ್ಯ ತಪಾಸಣಾ ಯೋಜನೆ ತರಲಾಗಿತ್ತು. ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಕಲ್ಯಾಣ ಮಂಡಳಿಯಲ್ಲಿ ಹಣದ ಕೊರತೆ ಇದೆ ಎಂದು ಹೇಳುವಾಗಲೇ ಇಂತಹ ನಿರುಪಯುಕ್ತ ಯೋಜನೆಗೆ ಮುಂದಾಗಿದ್ದೇಕೆ?’ ಎಂದು ಪ್ರಶ್ನಿಸಿದರು.

ಅಲ್ಲದೆ ಇದೇ ತಪಾಸಣೆಯನ್ನು ಕರ್ನಾಟಕ ಸರ್ಕಾರದ ಹೆಸರಾಂತ ವೈದ್ಯಕೀಯ ಸಂಸ್ಥೆಗಳಾದ ಕಿದ್ವಾಯಿ, ಜಯದೇವ, ಇಎಸ್‌ಐ, ಸೇರಿದಂತೆ ರಾಜ್ಯಾದ್ಯಂತ ಇರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಅತ್ಯಂತ ಕಡಿಮೆ ಖರ್ಚಿನೊಂದಿಗೆ ನಡೆಸಲು ಸಾಧ್ಯವಿದೆ. ಆದ್ದರಿಂದ ಇತಂಹ ದುಂದುವೆಚ್ಚದ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿದರು.

‘ಕಲ್ಯಾಣ ಮಂಡಳಿ ಪುನರ್ ರಚನೆಯಲ್ಲಿ ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ಹೊರಗಿಟ್ಟು ನೇಮಕ ಮಾಡಿರುವುದು ಖಂಡನೀಯ. ಇದುವರೆಗೂ ಪಾಲಿಸಿಕೊಂಡು ಬಂದ ತ್ರೀಪಕ್ಷೀಯ ವ್ಯವಸ್ಥೆಗೆ ತಿಲಾಂಜಲಿ ಇಡಲಾಗಿದೆ. ಕಾರ್ಮಿಕ ಇಲಾಖೆಯಲ್ಲಿ ತೀಪಕ್ಷೀಯ ವ್ಯವಸ್ಥೆ ಎಂಬುದು ವಿವಾದಗಳನ್ನು, ಕಾರ್ಮಿಕರ ಬದುಕಿನ ಪ್ರಶ್ನೆಗಳನ್ನು ಚರ್ಚಿಸಲು ಇರುವ ಸೂಕ್ತ ವೇದಿಕೆಯಾಗಿದೆ, ಆದ್ದರಿಂದ ಕೇಂದ್ರ ಕಾರ್ಮಿಕ ಸಂಘಗಳನ್ನೊಳಗೊಂಡು ಕಲ್ಯಾಣ ಮಂಡಳಿಯನ್ನು ಪುನರ್ ರಚಿಸಬೇಕೆಂದು’ ಎನ್‌ಸಿಎಲ್ ಕಾರ್ಮಿಕ ಮುಖಂಡ ಎನ್.ಪಿ.ಸಾಮಿ ಆಗ್ರಹಿಸಿದರು.
2020-21 ಸಾಲಿನಲ್ಲಿ ಶೈಕ್ಷಣಿಕ ಸಹಾಯಧನದ ಅರ್ಜಿಗಳಿಗೆ ಹಣ ಮಂಜೂರು ಮಾಡಬೇಕು, ಅಲ್ಲದೆ ವಿವಿಧ ಕಾರಣಗಳ ನೆಪದಲ್ಲಿ ಪಿಂಚಣಿ, ಮದುವೆ, ವೈದ್ಯಕೀಯ, ಹೆರಿಗೆ ಇತ್ಯಾದಿ ಸೌಲಭ್ಯಗಳಿಗಾಗಿ ಸಲ್ಲಿಸಲಾದ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಇಂತಹ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ಕಲ್ಯಾಣ ಮಂಡಳಿ ಕಾರ್ಯದರ್ಶಿ ಡಿ.ಭಾರತಿ, ಮನವಿಪತ್ರ ಸ್ವೀಕರಿಸಿ, ಬೇಡಿಕೆಗಳ ಕುರಿತು ಚರ್ಚಿಸಲು ಡಿಸೆಂಬರ್ 18 ರಂದು ಕಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸುವುದಾಗಿ ಪ್ರಕಟಿಸಿದರು. ಜಂಟಿ ಕಾರ್ಯದರ್ಶಿ ವೆಂಕಟರಾಜು, ಉಪ ಕಾರ್ಯದರ್ಶಿ ಜಾನ್ಸನ್ ಇದ್ದರು.
ಎಐಸಿಸಿಟಿಯು ಮುಖಂಡ ಅಪ್ಪಣ್ಣ ಪ್ರಭಾಕರ್ ಟಿಯುಸಿಸಿ ಮುಖಂಡ ಜಿ.ಆರ್.ಶಿವಶಂಕರ್,ಶ್ರೀಮತಿ ಅನಿತಾ, ಎಐಯುಟಿಯುಸಿ ಮುಖಂಡ ದೇವದಾಸ್, ಸಿಐಟಿಯು ಮುಖಂಡ ಬಿ.ಉಮೇಶ್,ಲಿಂಗರಾಜು ಯೋಗೀಶ್ ಜೆಪ್ಪಿನಮೊಗರು , ಸುರೇಶ್ ಕಲಾಗಾರ್ ಐಎನ್ ಟಿಯುಸಿ ಮುಖಂಡ ಯಲ್ಲಪ್ಪ,ಎನ್.ಸಿ.ಎಲ್ ಮುಖಂಡರಾದ ಧನಶೇಖರ್,ಲೀಲಾವತಿ ನೇತೃತ್ವ ವಹಿಸಿದ್ದರು.

Related Posts

Leave a Reply

Your email address will not be published.