ಡ್ರೋನ್ ಮೂಲಕ ರೈತರ ಕಣ್ಣೀರು ತರಿಸಿದ ಸಂಶೋಧನೆ

ದಿಲ್ಲಿಗೆ ಪ್ರತಿಭಟನೆ ಮಾಡಲು ಬಂದ ರೈತರಿಗೆ ಗೃಹ ಮಂತ್ರಿ ಅಮಿತ್ ಶಾ ನಿರ್ವಹಣೆಯ ಪೊಲೀಸ್ರು ನೀವು ಊಟ ಕೊಟ್ರೆ ನಾವು ಲಾಠಿ ಬೀಸ್ತೀವಿ ಎಂದಿದ್ದಾರೆ. ಕೊಟ್ಟ ಊಟಕ್ಕೆ ನ್ಯಾಯ ಬೆಲೆ ಕೇಳಿದರೆ ಡ್ರೋಣ್ ಮೂಲಕ ಹೊಗೆ ಬಾಂಬು ಸಿಡಿಸಿ ಕಣ್ಣೀರು ತರಿಸ್ತೀವಿ ಎಂದೂ ಹೊಸ ಸಂಶೋಧನೆ ಮಾಡಿ ತೋರಿಸಿದ್ದಾರೆ. ಗದ್ದೆಯಲ್ಲಿ ಇರಬೇಕಾದವರು ದಿಲ್ಲಿಗೆ ಬಂದ್ರೆ ನಾವು ಎಲ್ಲಿಗೆ ಹೋಗಬೇಕು, 144 ಸೆಕ್ಷನ್ ತಿಂಗಳುಗಟ್ಟಲೆ ಹಾಕ್ತೀವಿ ಎಂದು ಮೋದಿಯವರ ಸರಕಾರ ಪಣ ತೊಟ್ಟಂತಿದೆ. ಸದ್ಯ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರವು ದಿಲ್ಲಿಯ ಮೈದಾನವನ್ನೇ ತಾತ್ಕಾಲಿಕ ಜೈಲು ಮಾಡಿಕೊಳ್ಳಲು ಒಕ್ಕೂಟ ಸರಕಾರಕ್ಕೆ ಅವಕಾಶ ನೀಡಿಲ್ಲ. ಹಾಗಾಗಿ ಬಂಧಿಸಿದ ರೈತರನ್ನು ಎಲ್ಲೆಲ್ಲಿಗೂ ಅಲೆಸಿ ದೂರ ಬಿಡುವುದು ಮಾಡಿದರು.

ಇದರ ನಡುವೆ ಕರ್ನಾಟಕದ 16 ರೈತರು ಸೇರಿ 70 ಮಂದಿ ದಿಲ್ಲಿಗೆ ಹೊರಟಿದ್ದ ರೈತರನ್ನು ಮಧ್ಯ ಪ್ರದೇಶದ ಬಿಜೆಪಿ ಸರಕಾರ ಭೋಪಾಲ್‍ನಲ್ಲಿ ಬಂಧಿಸಿತ್ತು. ರೈತರ ಪ್ರತಿಭಟನೆಯ ದಿನ ಅವರನ್ನು ಉಜ್ಜಯಿನಿಗೆ ಒಯ್ದು ಇಟ್ಟಿತು. ಉಜ್ಜಯಿನಿ ವಿಕ್ರಮಾದಿತ್ಯನ ನ್ಯಾಯಾಲಯ ಇದ್ದ ಸ್ಥಳ ಎಂದು ಕತೆ. ರೈತರಿಗೆ ಇನ್ನು ನ್ಯಾಯ ಸಿಗುವುದು ಕತೆಯಿಂದ ಮಾತ್ರ ಸಾಧ್ಯ ಎನಿಸುತ್ತದೆ. ರೈತರ ಖಾತೆಗೆ ಹಣ ಹಾಕುವ ಮಾತು. ಅರ್ಹರಿಗಿಂತ ಅನರ್ಹರಿಗೇ ಹೆಚ್ಚು ಎನ್ನುವ ದೂರು. ರೈತರು ಪ್ರತಿಭಟನೆ ಮಾಡಿದರೆ ಅದನ್ನು ಕ್ಯಾತೆ ತೆಗೆದು ಮುರಿದಿಕ್ಕುವ ಸರಕಾರ ಮುಂದಿದೆ. ಬಿಜೆಪಿಯ ಒಕ್ಕೂಟ ಸರಕಾರದ ರೈತ ಕಲ್ಯಾಣ ಹಲವು ಬಗೆಯದು.

ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರಕಾರವು ರೈತರ ಸಾಲ ಮನ್ನಾ ಮಾಡಿತ್ತು. ಮೋದಿಯವರ ಸರಕಾರ ಬಂದು ಮಾಡಿದ್ದು ಉದ್ಯಮಿಗಳ ಸಾಲ ಮನ್ನಾ. ಹಿಂದೆ ಸರಕಾರಗಳು ಉದ್ಯಮಿಗಳಿಗೆ ಸಬ್ಸಿಡಿ ನೀಡಿದ್ದಿದೆ. ಉದ್ಯಮಿಗಳ 2,500 ಲಕ್ಷ ಕೋಟಿ ರೂಪಾಯಿಯಷ್ಟು ಸಾಲ ಮನ್ನಾ ಪ್ರಧಾನಿ ಮೋದಿಯವರ ಸರಕಾರದ ವಿಶ್ವ ದಾಖಲೆಯಾಗಿದೆ. ಬೆಳೆ ವಿಮೆ ಭಾರತದಲ್ಲಿ 1970ರ ದಶಕದಿಂದಲೂ ಇದೆ. ಹಸಿರು ಕ್ರಾಂತಿ ಅನುಸರಿಸಿ ಅದು ಹಲವು ಬದಲಾವಣೆ ಕಂಡಿದೆ. 2010ರಲ್ಲಿ ಮನಮೋಹನ್ ಸಿಂಗ್‍ರ ಕಾಂಗ್ರೆಸ್ ಸರಕಾರವು ಎಲ್ಲವನ್ನೂ ಸೇರಿಸಿ ರಾಷ್ಟ್ರೀಯ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿತು. ಅದರಂತೆ ರೈತನದು 2% ಹೂಡಿಕೆ; ಉಳಿದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ತಲಾ 50%ದಂತೆ ತುಂಬಬೇಕಿತ್ತು. 2016ರಲ್ಲಿ ಮೋದಿಯವರ ಸರಕಾರವು ಯಥಾಪ್ರಕಾರ ಇದನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಬೆಳೆ ವಿಮೆ ಯೋಜನೆ ಎಂದು ಹೆಸರು ಬದಲಿಸಿತು. 2020ರಲ್ಲಿ ತಾನು ಕಟ್ಟಬೇಕಾದ ಮೊತ್ತ ಕಡಿಮೆ ಮಾಡಲು ಬೆಳೆ ವಿಮೆ ಯೋಜನೆಗೆ ತಿದ್ದುಪಡಿ ತಂದು ಮೋದಿಯವರ ಸರಕಾರವು ಅದ್ಭುತವಾಗಿ ರೈತರ ಸೇವೆ ಮಾಡಿತು. ಪರಿಣಾಮವಾಗಿ ಬೆಳೆ ವಿಮೆ ಮಾಡಿಸುವ ರೈತರ ಪ್ರಮಾಣ ಅರ್ಧಕ್ಕರ್ಧ ಇಳಿದಿದೆ.

ಮಳೆ ಕೊರತೆ ಮತ್ತು ಬೆಳೆ ಕೊರತೆ ಆಧಾರದ ಮೇಲೆ ತಜ್ಞರು ಕರ್ನಾಟಕದಲ್ಲಿ 2023ರಲ್ಲಿ ಬಂದ ಕ್ಷಾಮ 122 ವರುಷಗಳಲ್ಲೇ ಅತಿ ದೊಡ್ಡದು ಎಂದಿದ್ದಾರೆ. ಕಳೆದ 122 ವರುಷಗಳಲ್ಲಿ ರಾಜ್ಯವು ಮೂರು ತೀವ್ರ ಬರಗಾಲ ನೋಡಿದ್ದು ಇದು ಆ ಮೂರರಲ್ಲಿ ಹೆಚ್ಚು ತೀವ್ರವಾದದ್ದು ಎನ್ನಲಾಗಿದೆ. ಬರ ಬಂದಾಗ ರಾಜ್ಯ ಬರ ಇಲ್ಲವೇ ವಿಪತ್ತು ನಿರ್ವಹಣೆ ನಿಧಿಯನ್ನು ನಿವಾರಣೆಗೆ ಬಳಸಲಾಗುತ್ತದೆ. ತೀವ್ರ ಬರ ಬಂದಾಗ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯ ಸಹಾಯ ಕೇಳಲಾಗುತ್ತದೆ. ಈ ಬಾರಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಇದ್ದುದು 929 ಕೋಟಿ ರೂಪಾಯಿ. ಭಾರೀ ಬರ ಇದ್ದುದರಿಂದ ರಾಜ್ಯ ಸರಕಾರವು ಪರಿಹಾರಕ್ಕೆ 4,666.12 ಕೋಟಿ ರೂಪಾಯಿ ವ್ಯಯಿಸಿದೆ. ಒಕ್ಕೂಟ ಸರಕಾರದಿಂದ ಬರ ಪರಿಹಾರಕ್ಕೆ ಭಾರೀ ಮೊತ್ತ ಕೇಳಿದರೂ ಒಂದು ಪೈಸೆ ಕೂಡ ಕೊಟ್ಟಿಲ್ಲ. ಇದನ್ನು ಬಿಜೆಪಿ ಮೂಲದವರೇ ಆದ ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಕೂಲಿಗೆ ಕಾಳು, ನರೇಗಾ ಗ್ರಾಮೀಣ ಉದ್ಯೋಗ ಕಾತರಿ ಯೋಜನೆಗಳಲ್ಲಿ ನಕಲಿಗಳ ಕಾಟ ತೀವ್ರವಾಗಿದೆ. ಅಲ್ಲದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾತರಿ ಯೋಜನೆಯ ವಿಸ್ತರಣೆಗೆ ಬರಗಾಲದಲ್ಲೂ ಒಕ್ಕೂಟ ಸರಕಾರ ಒಪ್ಪಿಲ್ಲ. ಈ ತಾರತಮ್ಯ ಮತ್ತು ತಾರಮ್ಮಯ್ಯ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯ ಮೂಲ ತತ್ವಗಳನ್ನು ಊನ ಮಾಡುವುದಾಗಿದೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‍ರ ಕಾಂಗ್ರೆಸ್ ಸರಕಾರವು ಬರ ನಿರ್ಧಾರದ ನೀತಿಯನ್ನು ಸ್ಪಷ್ಟವಾಗಿ ಇಟ್ಟಿತ್ತು. ಮೋದಿಯವರ ಸರಕಾರವು ನಿರ್ಧಾರ ಪದ್ಧತಿಯನ್ನು ಸಂಕೀರ್ಣಗೊಳಿಸಿ ರಾಜ್ಯಗಳಿಗೆ ಬರ ನಿರ್ವಹಣೆಗೆ ಹಣ ನೀಡಬಾರದು ಎಂಬುದನ್ನು ಜಾಣತನ ತೋರಿ ಸಾಗಿಸಿಕೊಂಡಿದೆ. ಕೇಂದ್ರದ ಕಾಂಗ್ರೆಸ್ ಸರಕಾರದ ಕಾಲದಲ್ಲಿ ಮಳೆಯ ವಾರ್ಷಿಕ ಕೊರತೆ, ಕಟಾವು ಕೈಗೆ ಬಂದ ಬೆಳೆಯಲ್ಲಿನ ಕೊರತೆ, ಆಗ ಸಿಕ್ಕ ಬೆಲೆ ಇದರ ಮೇಲೆ ಬರಗಾಲ ತೀವ್ರವಾದುದೇ ಸಾಮಾನ್ಯವಾದುದೇ ಎಂದು ಲೆಕ್ಕ ಹಾಕಲಾಗುತ್ತಿತ್ತು. ಮೋದಿಯವರ ಸರಕಾರ ತಂದ ತಿದ್ದುಪಡಿ ಭಯಂಕರ.

ಬಿತ್ತನೆ ಎಷ್ಟು ಮಾಡಲಾಗಿದೆ ಎಂಬುದು ಕ್ಷಾಮ ನಿರ್ಧರಿಸಲು ಅಳಗೋಲು. ಆದರೆ ಬಿತ್ತಿದ್ದು ನಾಶವಾದರೆ ಕೇಳುವವರಿಲ್ಲ. ಹಿಂದೆ ಬಿತ್ತಿದ್ದರಲ್ಲಿ ಅರ್ಧದಷ್ಟು ಹಾಳಾದರೆ ಅದು ಬರ ಸೂಚಕ. ಈಗ ಬಿತ್ತನೆ ಮಾಡಿದ್ದು ಮಾತ್ರ ಲೆಕ್ಕ. ಹಿಂದೆ ವಾರ್ಷಿಕ ಮಳೆ ಕೊರತೆ ಲೆಕ್ಕ ಹಾಕಲಾಗುತ್ತಿತ್ತು. ಈಗ ಭೂಮಿಯ ತೇವಾಂಶ, ಜಲಾಶಯಗಳಲ್ಲಿನ ನೀರು ಅಳಗೋಲು. ಹಿಂದೆ ಬೆಳೆ ಹತ್ತು ಮುಡಿಯ ಬದಲು ಐದು ಮುಡಿ ಬಂದರೆ ಕ್ಷಾಮ. ಈಗ ಹಸಿರು ಸೂಚ್ಯಂಕ ಮಾತ್ರ ಮುಖ್ಯ. ಗದ್ದೆ ಹಸಿರಾಗಿದ್ದರೆ ಆಯಿತು, ತೆನೆ ಕಟ್ಟಬೇಕು ಎಂದೇನೂ ಇಲ್ಲ. ಹುಟ್ಟಿಸಿದವನು ಹುಲ್ಲು ಮೇಯಿಸುವುದಿಲ್ಲ ಎಂದು ಒಂದು ಗಾದೆ ಇದೆ. ಈ ಹಸಿರು ಸೂಚ್ಯಂಕ ನೋಡಿದರೆ ಆಳುವವರು ಹುಲ್ಲು ಬೇಯಿಸಲು ಹೇಳುತ್ತಿದ್ದಾರೆ ಎಂದುಕೊಳ್ಳಬಹುದು.

Related Posts

Leave a Reply

Your email address will not be published.