ಸಾಹಿತಿ ರಾಧಾಕೃಷ್ಣ ಸೇರಿ ಮೂವರಿಗೆ ಗಡಿನಾಡ ಚೇತನ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗೆ ಕೇರಳದ ಕಾಸರಗೋಡಿನ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಸೇರಿ ಮೂವರು ಆಯ್ಕೆಯಾಗಿದ್ದಾರೆ.
ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದೇವರು ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ರಾಧಾಕೃಷ್ಣ, ‘ಜಯದೇವಿತಾಯಿ ಲಿಗಾಡೆ’ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ಬೀದರ್‌ನ ಕನ್ನಡ ಪರ ಹೋರಾಟಗಾರ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ‘ಕಯ್ಯಾರ ಕಿಞ್ಞಣ್ಣ ರೈ’ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಪ್ರಶಸ್ತಿಗೆ ಬೆಳಗಾವಿಯ ಕನ್ನಡ ಪರ ಚಿಂತಕ ಬಿ.ಎಸ್. ಗವಿಮಠ ಆಯ್ಕೆಯಾಗಿದ್ದಾರೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆ ಮಾಡಿದೆ. ಸಾಹಿತಿ ಸರಜೂ ಕಾಟ್ಕರ್, ಕನ್ನಡ ಪ್ರಾಧ್ಯಾಪಕರಾದ ಎಂ.ಎಸ್.ದುರ್ಗಾ ಪ್ರವೀಣ್, ಆರ್.ನಾಗಪ್ಪಗೌಡ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಸಮಿತಿಯಲ್ಲಿ ಇದ್ದರು. ಪ್ರಶಸ್ತಿಯು ತಲಾ ೧ ಲಕ್ಷ ನಗದು ಒಳಗೊಂಡಿದ್ದು, ಆಯ್ಕೆ ಸಮಿತಿಯು ಪ್ರಶಸ್ತಿ ಮೊತ್ತವನ್ನು ೩ ಲಕ್ಷಕ್ಕೆ ಹೆಚ್ಚಿಸಲು ಪ್ರಾಧಿಕಾರಕ್ಕೆ ಸಲಹೆ ನೀಡಿದೆ.