ಮಂಗಳೂರು: ಫಾದರ್ ಮುಲ್ಲರ್ ರೋಟರಿ ಸ್ಕಿನ್ ಬ್ಯಾಂಕ್ ಉದ್ಘಾಟನೆ
ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಮಂಗಳೂರು ವತಿಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ‘ಫಾದರ್ ಮುಲ್ಲರ್-ರೋಟರಿ ಸ್ಕಿನ್ ಬ್ಯಾಂಕ್’ ಉದ್ಘಾಟಿಸಲಾಯಿತು.
ಸ್ಕಿನ್ ಬ್ಯಾಂಕ್‌ನ್ನು ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಕಿನ್ ಬ್ಯಾಂಕ್ ಅನೇಕ ವರ್ಷಗಳ ಹಿಂದಿನ ಕನಸಾಗಿದ್ದು, ಅದಿಂದು ನನಸಾಗಿದೆ. ಇತರ ದಾನಗಳಂತೆ ಚರ್ಮ ದಾನವೂ ಪ್ರಮುಖವಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಬೆಂಕಿ ಗಾಯವಾದವರಿಗೆ ತಕ್ಷಣ ಚಿಕಿತ್ಸೆ ನೀಡಲು ಸ್ಕಿನ್ ಬ್ಯಾಂಕ್ ಪ್ರಯೋಜನಕಾರಿಯಾಗಲಿದೆ.
ಗಾಯಗೊಂಡ ಅನೇಕ ಮಂದಿಗೆ ಮರು ಜೀವ ನೀಡಲು ಚರ್ಮ ದಾನದಿಂದ ಸಾಧ್ಯವಿದೆ. ದ.ಕ. ಜಿಲ್ಲೆಯ ಮೊದಲ ಸ್ಕಿನ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಫಾದರ್ ಮುಲ್ಲರ್ ಸಂಸ್ಥೆ ಪಾತ್ರವಾಗಿದೆ. ಇದು ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿಯಾಗಿದೆ ಎಂದು ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು.
ಯೋಜನೆಯ ಅಧ್ಯಕ್ಷ ಅರ್ಚಿಬಾಲ್ಡ್ ಮಿನೇಜಸ್ ಮಾತನಾಡಿ, ಚರ್ಮ ದಾನ ನೀಡುವುದು ಅಂದುಕೊಂಡಷ್ಟು ಸುಲಭವಿಲ್ಲ. ತಕ್ಷಣಕ್ಕೆ ಚರ್ಮ ಪಡೆಯಲು ಕಷ್ಟವಾಗಿದೆ. ಇಂದಿನ ವಿನೂತನ ತಂತ್ರಜ್ಞಾನ ಇದಕ್ಕೆ ವ್ಯತಿರಿಕ್ತವೂ ಆಗಿದೆ. ಸ್ಕಿನ್ ಬ್ಯಾಂಕ್ ಮೂಲಕ ಇಂದು ವಿವಿಧ ಗಾಯಗಳಾದವರ ಜೀವ ಉಳಿಸಲು ಸಾಧ್ಯ ಎಂದರು.
ರೋಟರಿ ಜಿಲ್ಲೆ ೩೨೮೧ರ ಗವರ್ನರ್ ಎಚ್.ಆರ್. ಕೇಶವ್ ಅವರು ಮಾತನಾಡಿ, ಚರ್ಮದಲ್ಲಿ ಸೌಂದರ್ಯ ಅಡಗಿದೆ.ರಕ್ತ ನೀಡಲು ಅನೇಕರು ಮುಂದಾಗುತ್ತಾರೆ. ಆದರೆ ಚರ್ಮ ನೀಡುವುದು ಅಂದುಕೊಂಡಷ್ಟು ಸುಲಭವಲ್ಲ. ನಾನಾ ಪರೀಕ್ಷೆಯ ಮೂಲಕ ಇದನ್ನು ಮಾಡಬೇಕಾಗುತ್ತದೆ. ಸ್ಕಿನ್ ಬ್ಯಾಂಕ್ ಮೂಲಕ ಇಂದು ವಿವಿಧ ಗಾಯಗಳಾದವರ ಜೀವ ಉಳಿಸಬಹುದಾಗಿದೆ ಎಂದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ. ಅಜಿತ್ ಬಿ. ಮಿನೇಜಸ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವೆರಾ,, ಡೀನ್ ಆಂಟನಿ ಸಿಲ್ವನ್ ಡಿಸೋಜಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್ ಕೆ., ರೋಟರಿ ಕ್ಲಬ್‌ನ ಪ್ರಮುಖರಾದ ಪ್ರಕಾಶ್ ಕಾರಂತ್, ಶಿವಾಣಿ ಬಾಳಿಗಾ, ಕಿಶನ್ ಕುಮಾರ್, ಆರ್.ಕೆ. ಭಟ್, ಅರ್ಚಿಬಾಲ್ಡ್ ಮಿನೇಜಸ್ ಉಪಸ್ಥಿತರಿದ್ದರು.