ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂದಿರಕ್ಕೆ ಧರ್ಮಸ್ಥಳದ ಅನುದಾನ ಚೆಕ್ ವಿತರಣೆ

ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿವಿಗೆ ಭಜನಾ ಮಂದಿರಗಳು ಮಹತ್ತರವಾದ ಕೊಡುಗೆಗಳನ್ನು ನೀಡುತ್ತಿದ್ದು, ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಬಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಹೇಳಿದರು.


ಅವರು ಶುಕ್ರವಾರ ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ಭಜನಾ ಮಂದಿರದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಿಡುಗಡೆಯಾದ ಒಂದು ಲಕ್ಷ ರೂನ ಅನುದಾನದ ಚೆಕ್ ವಿತರಣಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರ, ಧಾರ್ಮಿಕ ಶಿಕ್ಷಣ ಸಿಗಬೇಕಾದರೆ ಭಜನಾ ಮಂದಿರಗಳು ಬೇಕು, ಧಾರ್ಮಿಕ ನಂಬಿಕೆಗಳು ಇಲ್ಲಿ ಬಲಗೊಳ್ಳುತ್ತವೆ, ಇಂತಹ ಶ್ರದ್ಧಾ ಕೇಂದ್ರಗಳು ಸುಸ್ಥಿರವಾಗಿದ್ದಾಗ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ ಎನ್ನುವ ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅನುದಾನ ನೀಡಿ ಪ್ರೋತ್ಸಾಹಿಸುತ್ತಾರೆ. ಇಲ್ಲಿನ ಶ್ರೀರಾಮ ಭಜನಾ ಮಂದಿರ ಮಾದರಿಯಾಗಿದ್ದು, ಇದರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದಿಂದ ಇನ್ನಷ್ಟು ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪ್ರಕಾಶ್ ಕುಮಾರ್ ಹೇಳಿದರು.


ಚೆಕ್ ವಿತರಣೆ ನೆರವೇರಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ನ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಪಿ.ಅಳಿಯೂರು ನಾತನಾಡಿ ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಬಹಳಷ್ಟು ಭಜನಾ ಮಂದಿರಗಳು ನಿರ್ಮಾಣವಾಗಿವೆ, ಅವುಗಳಿಗೆ ಹೆಗ್ಗಡೆಯವರು ಅನುದಾನ ನೀಡಿ ಜೀರ್ಣೋದ್ಧಾರ ಕಾರ್ಯಗಳಿಗೆ ವೇಗವನ್ನು ನೀಡಿದ್ದಾರೆ. ಇದೀಗ ಶ್ರೀ ಕ್ಷೇತ್ರದಿಂದ ಭಜನ ಪರಿಷತ್ ಮೂಲಕ ಭಜನಾ ಮಂದಿರಗಳಿಗೆ ಅನುದಾನಗಳನ್ನು ಮಂಜೂರು ಮಡಲಾಗುತ್ತಿದೆ, ಪ್ರಪ್ರಥಮವಾಗಿ ಈ ಭಜನಾ ಮಂದಿರಕ್ಕೆ ಅನುದಾನ ನೀಡುವ ಯೋಗ ನನ್ನದಾಗಿದೆ ಎಂದರು.


ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಕೆ.ಎಸ್,ಬಾಲಕೃಷ್ಣ ಗೌಡ ಚೆಕ್ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಭಜನಾ ಮಂದಿರದ ಉಪಾಧ್ಯಕ್ಷ ಸುಪ್ರಿತ್ ರೈ ಕೊಯಿಲ, ಗೌರವ ಸಲಹೆಗಾರರಾದ ರಾಜೀವ ಗೌಡ ಪಟ್ಟೆದಮೂಲೆ, ರಾಮಯ್ಯ ಗೌಡ ಬುಡಲೂರು, ಕುಶಾಲಪ್ಪ ಗೌಡ ಕಡೆಂಬ್ಯಾಲ್, ಜತೆ ಕಾರ್ಯದರ್ಶಿ ಪ್ರವೀಣ್ ರಾಜ್ ಕೆ.ಎಸ್., ಸೇವಾ ಪ್ರತಿನಿಧಿ ಪ್ರೇಮಾವತಿ ಮಹಾಬಲ ನಾಯ್ಕ, ಒಕ್ಕೂಟದ ಅಧ್ಯಕ್ಷ ಪುರಂದರ ತುಂಬೆತಡ್ಕ, ಶ್ರೀರಾಮ ಗೆಳೆಯರ ಬಳಗದ ಸದಸ್ಯ ಮುಖೇಶ್ ಕಡೆಂಬ್ಯಾಲ್ ಮತ್ತಿತರರು ಉಪಸ್ಥಿತರಿದ್ದರು. ಗೋಳಿತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ, ವಂದಿಸಿದರು.

Related Posts

Leave a Reply

Your email address will not be published.