33 ವರುಷಗಳ ಬಳಿಕ ಮಂಗಳೂರು ವಿವಿಗೆ ಕಬಡ್ಡಿ ಕಿರೀಟ
ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣ ಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರಗಳು ಜಂಟಿಯಾಗಿ ನಡೆಸಿದ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು 33 ವರುಷಗಳ ಬಳಿಕ ಮತ್ತೆ ಚಾಂಪಿಯನ್ ಅಯಿತು.
ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿಯ ಫೈನಲಿನಲ್ಲಿ 45- 15 ಅಂಕಗಳಿಂದ ಮಂಗಳೂರು ವಿವಿಗೆ ಸೋತ ಚೆನ್ನೈನ ವೇಲ್ ಸಯನ್ಸ್ ಆಂಡ್ ಟೆಕ್ನಾಲಜಿ ವಿವಿ ತಂಡವು ರನ್ನರ್ ಅಪ್ ಆಯಿತು.
ಸೆಮಿಫೈನಲ್‌ನಲ್ಲಿ ಮಂಗಳೂರು ವಿವಿಯು ಹರಿಯಾಣದ ಚೌಧರಿ ಬನ್ಸಿಲಾಲ್ ವಿವಿ ತಂಡವನ್ನು 49- 35ರಲ್ಲಿ ಸೋಲಿಸಿತ್ತು. ಈ ತಂಡದೊಂದಿಗೆ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯವು ಜಂಟಿ ಮೂರನೆಯ ಸ್ಥಾನ ಪಡೆದವು.
ಮಂಗಳೂರು ವಿಶ್ವವಿದ್ಯಾನಿಲಯದ ವಿನಯ್ ಬೆಸ್ಟ್ ಡಿಫೆಂಡರ್, ರತನ್ ಬೆಸ್ಟ್ ರೈಡರ್ ಮತ್ತು ವೇಲ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ತಂಡದ ಬಾಬು ಉತ್ತಮ ಆಲ್ ರೌಂಡರ್ ಪ್ರಶಸ್ತಿಯ ಟ್ರೋಫಿ ಎತ್ತಿಕೊಂಡರು.