ಈದಿನ ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
ಈದಿನ ಡಾಟ್ ಕಾಮ್ ಯೂಟ್ಯೂಬ್ ಬ್ಲಾಕ್ ಮಾಡಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆ ಮೂಲಕ ಧರ್ಮಸ್ಥಳ ಮತ್ತು ಸೌಜನ್ಯ ವಿಚಾರಕ್ಕೆ ಸಂಬಂಧಿಸಿ ಈದಿನ ಡಾಟ್ ಕಾಮ್‌ಗೆ ಮೊದಲ ಗೆಲುವು ಸಿಕ್ಕಿದಂತಾಗಿದೆ.

ಧರ್ಮಸ್ಥಳ ಮತ್ತು ಸೌಜನ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟಿಸದಂತೆ ಇದ್ದ ಸಿವಿಎಲ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಧರ್ಮಸ್ಥಳ ದೇವಸ್ಥಾನದ ಟ್ರಸ್ಟ್‌ನ ಕೆಲವರು ಈದಿನ ಡಾಟ್ ಕಾಮ್ ಯೂಟ್ಯೂಬ್ ನಿರ್ಬಂಧ ವಿಧಿಸುವಂತೆ ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದನ್ನು ಏಕಸದಸ್ಯ ಪೀಠವು ಎತ್ತಿ ಹಿಡಿದಿತ್ತು. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಈದಿನ ಚಾನೆಲ್ ಅನ್ನು ಯೂಟ್ಯೂಬ್ ಕೂಡ ಜುಲೈ 10ರಿಂದ ಬ್ಲಾಕ್ ಮಾಡಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಈ ತಂಡವು ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಮನವಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಾಧೀಶ ಸುನಿಲ್ ದತ್ ಯಾದವರ್ ಅವರಿದ್ದ ಏಕಸದಸ್ಯ ಪೀಠವು, ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿದೆ. ಅದಲ್ಲದೆ ಬ್ಲಾಕ್‌ನ್ನು ತೆರವುಗೊಳಿಸುವಂತೆ ಯೂಟ್ಯೂಬ್‌ಗೆ ನಿರ್ದೇಶನ ನೀಡಿದೆ.
ಈದಿನ ತಂಡದ ಮನವಿಯನ್ನು ಪುರಸ್ಕರಿಸಿದ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು, ಈ ದಿನ ಡಾಟ್ ಕಾಮ್ ಯೂಟ್ಯೂಬ್ ಬ್ಲಾಕ್ ಮಾಡಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಲು ಯೂಟ್ಯೂಬ್‌ಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ, ಈ ಹಿಂದಿನ ಸಿವಿಲ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿಲ್ಲ ಎಂದು ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದರು. ಈ ಬಗ್ಗೆ ಇನ್ನಷ್ಟೇ ಅಧಿಕೃತ ಆದೇಶವನ್ನು ಹೈಕೋರ್ಟ್ ಪ್ರಕಟಿಸಲಿದೆ.
ಈದಿನ ತಂಡದ ಪರವಾಗಿ ಹೈಕೋರ್ಟ್‌ನ ವಕೀಲರಾದ ಕ್ಲಿಫ್ಟನ್ ಡಿ ರೋಝಾರಿಯೋ, ಮೈತ್ರೇಯಿ ಕೃಷ್ಣನ್ ಅವರು ವಾದಿಸಿದರು. ಧರ್ಮಸ್ಥಳ ದೇವಸ್ಥಾನ ಟ್ರಸ್ಟ್‌ನ ಪರವಾಗಿ ಹಿರಿಯ ವಕೀಲ ಮಾಜಿ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಹಾಜರಿದ್ದರು.

















