ಕಾಪು ಕಾಂಗ್ರೆಸ್ ವತಿಯಿಂದ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಜಯಂತಿ ಆಚರಣೆ

ಕಾಪು ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತದ ಪೂರ್ವ ಪ್ರಧಾನಮಂತ್ರಿ, “ಭಾರತದ ಆಧುನಿಕ ವಿಕಸನ ಶಿಲ್ಪಿ” ಎಂದು ಕರೆಯಲ್ಪಡುವ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ದಿಗ್ಗಜ ನಾಯಕ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹುಟ್ಟುಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, “ರಾಜೀವ್ ಗಾಂಧಿ ಅವರು ಭಾರತದ ತಂತ್ರಜ್ಞಾನ ಕ್ರಾಂತಿಯ ಮುಂಚೂಣಿಗರಾಗಿದ್ದು, ಮಾಹಿತಿ ತಂತ್ರಜ್ಞಾನ ಹಾಗೂ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ದಾರಿಯನ್ನು ತೆರೆದವರು. ಯುವಕರಿಗೆ ನಂಬಿಕೆ ಇಟ್ಟು ಹೊಸ ಭಾರತದ ಕನಸನ್ನು ತೋರಿಸಿದ ನಾಯಕ ರಾಜೀವ್ ಗಾಂಧಿ” ಎಂದು ಪ್ರಶಂಸಿಸಿದರು.

ಅವರು ಮುಂದುವರೆದು, “ದೇವರಾಜ ಅರಸು ಅವರು ಸಮಾಜ ನ್ಯಾಯದ ಪರಿಪೂರ್ಣ ಹೋರಾಟಗಾರರಾಗಿದ್ದು, ಹಿಂದುಳಿದ ವರ್ಗ, ದಲಿತ ಮತ್ತು ಬಡ ಜನರ ಕಲ್ಯಾಣಕ್ಕಾಗಿ ತಾವು ಮಾಡಿದ ಅಸಾಧಾರಣ ಕೆಲಸಗಳನ್ನು ಇಂದಿಗೂ ಜನತೆ ನೆನಪಿಸುತ್ತಿದ್ದಾರೆ. ಅರಸು ಅವರ ಆಡಳಿತ ಸಾಮಾಜಿಕ ಸಮಾನತೆಯ ಮಾದರಿಯಾಗಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ‘ಉಳುವವನೇ ಹೊಲದೊಡೆಯ’ ಎಂಬ ಕ್ರಾಂತಿಕಾರಿ ಕಾನೂನು ಜಾರಿಗೆ ತಂದದ್ದು ಕೂಡ ದೇವರಾಜ ಅರಸು ಅವರೇ. ಹೀಗಾಗಿ ಅವರು ನಿಜವಾದ ಜನನಾಯಕರೆಂದು ಇತಿಹಾಸದಲ್ಲಿ ಉಳಿದಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ರಕ್ಷಣಾಪುರ ಜವನಿರ್ ಕಾಪು ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ದೀಪಕ್ ಎರ್ಮಲ್, ಕಾಂಗ್ರೆಸ್ ಮುಖಂಡ ಸುನಿಲ್ ಡಿ. ಬಂಗೇರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ್ ಸಾಲಿಯಾನ್, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಪ್ರಭಾಕರ್ ಆಚಾರ್ಯ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಶ್ವಿನಿ ಬಂಗೇರ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸತೀಶ್ ಚಂದ್ರ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು ಗಣೇಶ್ ಎನ್. ಕೋಟ್ಯಾನ್, ರಮೀಜ್ ಹುಸೇನ್, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್, ಪುರಸಭೆ ಸದಸ್ಯರು ದೇವರಾಜ್ ಹಾಗೂ ರಾಧಿಕಾ ಮುಂತಾದವರು ಉಪಸ್ಥಿತರಿದ್ದರು.
