ಬೆತ್ತದ ಬುಡಕಟ್ಟು ಗಜಮೇಳ || V4NEWS

ಬೆಂಗಳೂರಿನಲ್ಲಿ ಲಂಟಾನದಿಂದ ಮಾಡಿದ ಆನೆಗಳು ಈಗ ನೂರಾರು ಸಂಖ್ಯೆಯಲ್ಲಿ ಕಬ್ಬನ್ ಪಾರ್ಕ್, ಲಾಲ್‍ಬಾಗ್, ವಿಧಾನ ಸೌಧ ಎಂದು ನಾನಾ ಕಡೆಗಳಲ್ಲಿ ಲಗ್ಗೆ ಇಟ್ಟಿವೆ; ದಾಳಿ ಮಾಡಿವೆ. ಇವು ಬೆಂಗಳೂರಿನ ಅಂಚಿನ ಆನೆಕಲ್ ತಾಲೂಕು, ಕನಕಪುರ ರಸ್ತೆಗಳಲ್ಲಿ ಕಾಣಿಸುವ ನಿಜ ಆನೆಗಳಲ್ಲ. ಇವೆಲ್ಲ ಲಂಟಾನದಿಂದ ತಯಾರಿಸಿದ ಆನೆಗಳಾಗಿವೆ. ಕರ್ನಾಟಕ, ತಮಿಳುನಾಡು, ಕೇರಳದ 150ಕ್ಕೂ ಹೆಚ್ಚು ಬಡಕಟ್ಟು ಜನರು ಲಂಟಾನ ಬಳಸಿ ಈ ನಿಜ ಆನೆ ಗಾತ್ರದ ಆನೆಗಳನ್ನು ನಿರ್ಮಿಸಿದ್ದಾರೆ.

ಪರಿಸರ ಜಾಗೃತಿ, ಬುಡಕಟ್ಟು ಜನರಿಗೆ ಕೆಲಸ, ಲಂಟಾನ ನಾಶ ಇಲ್ಲವೇ ಬಳಕೆ ಈ ಆನೆ ದಾಳಿಯ ಹಿಂದೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಡೆಕೋಲು, ಹೆಬ್ರಿ ತಾಲೂಕು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು, ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕು, ಕೊಡಗು ಜಿಲ್ಲೆ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೆಲ್ಲ ಆಗಾಗ ಆನೆ ದಾಳಿಗಳಾಗುತ್ತವೆ. ಆನೆಗಳ ಕಾಡನ್ನು ಸವರಿ ಮಾನವ ನಾಡು ಮಾಡಿಕೊಂಡಿರುವುದರಿಂದ ಆನೆಗಳು ಎಲ್ಲಿಗೆ ಹೋಗಬೇಕು? ಈ ನಾಡಿನ ಕಬ್ಬು, ಬಾಳೆ ಹುಡುಕಿಯೇ ಬರಬೇಕು.


ಸೋಲಿಗ, ಕೊರವ, ಪೊಲ್ಲಿಯರ್ ಬುಡಕಟ್ಟು ಜನರು ನಿರ್ಬಂದಿತ ಕಾಲದಲ್ಲಿ ಕಂಡುಕೊಂಡ ಬದಲಿ ವ್ಯವಸ್ಥೆಗಳಲ್ಲಿ ಒಂದು ಲಂಟಾನದಿಂದ ಬುಟ್ಟಿ ಹೆಣೆಯುವುದು. ಇದನ್ನು ಅರೆಬರೆ ಸುಟ್ಟು ಚೆನ್ನಾಗಿ ಹೊರಮೈ ಕೆರೆದ ಮೇಲೆ ಬೆತ್ತ ಸಿಗುತ್ತದೆ. ಆ ಬೆತ್ತದಿಂದ ಹಿಂದೆ ಬೆತ್ತ ಮತ್ತು ಕಾಡು ಬಳ್ಳಿಗಳಿಂದÉ ಮಾಡುತ್ತಿದ್ದ ಎಲ್ಲ ಬಗೆಯ ಕಲಾತ್ಮಕ ವಸ್ತುಗಳನ್ನು ಮಾಡುವುದು ಸಾಧ್ಯ. ಈ ಬುಡಕಟ್ಟು ಜನರು 50ಕ್ಕೂ ಹೆಚ್ಚು ಬಗೆಯ ವಸ್ತುಗಳನ್ನು ತಯಾರಿಸುತ್ತಾರೆ. ಈಗ ದೊಡ್ಡ ಆನೆಗಳನ್ನು ತದ್ರೂಪವೋ ಎಂಬಂತೆ ಮಾಡಿ ನಿಲ್ಲಿಸಿದ್ದಾರೆ. ತುಳುನಾಡಿನಲ್ಲಿ ಮುಖ್ಯವಾಗಿ ಕೊರಗ ಜನಾಂಗದವರು ಕಾಡಿನ ಬೆತ್ತ, ಬಿಳಲುಗಳಿಂದ ತಟ್ಟಿ ಸಿಬುಲು, ಬುಟ್ಟಿ ಇತ್ಯಾದಿ ಮಾಡುತ್ತಿದ್ದರು. ಅದನ್ನು ವೈಶ್ಯರು ಮೂರು ಕಾಸಿಗೆ ಕೊಂಡು ನೂರು ಕಾಸಿಗೆ ಮಾರಿದ್ದೂ ಇದೆ. ಅವರಲ್ಲೂ ಕೆಲವರು ಈ ಲಂಟಾನ ವಿದ್ಯೆ ಕಲಿತುಕೊಳ್ಳುವುದೊಳಿತು


ಮುಖ್ಯವಾಗಿ ಚಾಮರಾಜನಗರ ಜಿಲ್ಲೆ ಮತ್ತು ಸ್ವಲ್ಪ ಮಟ್ಟಿಗೆ ಮೈಸೂರು ಜಿಲ್ಲೆಯ ಕಾಡುಗಳಲ್ಲಿ ಅದಕ್ಕಿಂತಲೂ ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟದ ಕಾಡುಗಳಲ್ಲಿ ವಾಸ ಮಾಡುವವರು ಸೋಲಿಗ ಎನ್ನುವ ಬುಡಕಟ್ಟು ಜನರು. ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲೂ ಇರುವರು. ಇವರು ಕರ್ನಾಟಕದ ಅತಿ ಪುರಾತನ ಆದಿವಾಸಿ ಜನಾಂಗಗಳಿಗೆ ಸೇರಿದವರಲ್ಲಿ ಒಂದು ಜನಾಂಗವೆನಿಸಿದೆ. ಕಾಡನ್ನೇ ನಂಬಿದ ಇವರದು ಸೋಲಿಗ ಎಂದರೆ ಸೊಲ್ಲಿಗ ಭಾಷೆ. ವ್ಯವಹಾರಕ್ಕೆ ಕನ್ನಡ, ತಮಿಳು ಬಲ್ಲರು.


ಇವರಲ್ಲಿ ಉರುಳಿ ಸೋಲಿಗರು, ಬುರುಡೆ ಸೋಲಿಗರು, ಮಲೆ ಸೋಲಿಗರು ಎಂದು ಕೆಲವು ಪ್ರಭೇದಗಳಿವೆ. ಕಾಡುತ್ಪತ್ತಿ ನಂಬಿ ಬದುಕಿದ ಇವರಿಗೆ ಅರಣ್ಯ ರಕ್ಷಣೆ ಕಾಯ್ದೆ ಬಿಗಿಗೊಂಡ ಮೇಲೆ ಬದುಕು ದುಸ್ತರವಾಯಿತು. ಇವರ ಮನೆಯ ಪ್ರದೇಶ ಪೋಡು. ಹಾಲ್ಕುಲ, ಬೆಳ್ಳಿ ಕುಲ ಎಂದು ಇವರಲ್ಲಿ ಏಳು ಕುಲಗಳಿವೆ. ಜೇನು ಮಾರಿ, ಬೇಟೆಯಾಡಿ ಉಂಡು ಎಂದೆಲ್ಲ ಬದುಕು ಇತ್ತು. ಕಾಡಿನ ಬೆತ್ತ ದುರ್ಲಬವಾದುದರಿಂದ ಲಂಟಾನ ಬುಟ್ಟಿ ಹೆಣೆಯುವುದನ್ನು ಕಲಿತರು. ಈಗ ಆನೆ ನಿಲ್ಲಿಸಿದ್ದಾರೆ.


ತೆಂಕಣ ಅಮೆರಿಕ ಮೂಲದ ಲಂಟಾನವನ್ನು 1800ರ ಸುತ್ತಿನಲ್ಲಿ ಅಲಂಕಾರಿಕ ಸಸ್ಯವಾಗಿ ಬ್ರಿಟಿಷರು ಭಾರತಕ್ಕೆ ತಂದರು. ಕೆಂಪು, ಹಳದಿ, ಬಿಳಿ, ನೀಲಿ ಎಂದು ಬಹುಬಣ್ಣದ ಆಕರ್ಷಕ ಹೂಗುಚ್ಚವನ್ನು ಲಂಟಾನ ಬಿಡುತ್ತದೆ. ಅದಕ್ಕೊಂದು ಪರಿಮಳವೂ ಇದೆ. ಹಾಗಾಗಿ ಜೇನುನೊಣಗಳು, ಪತಂಗಗಳು ಇದರ ಸುತ್ತ ಸುತ್ತಿಕೊಳ್ಳುತ್ತವೆ. ಇದರಲ್ಲಿ ಹಸಿರು ಕಾಯಿಯಾಗಿ, ಕಡುನೀಲಿ ಬಣ್ಣದ ಹಣ್ಣುಗಳಾಗುತ್ತವೆ. ಆ ಹಣ್ಣುಗಳು ಕೆಲವು ಹಕ್ಕಿಗಳಿಗೆ ಪ್ರಿಯ ಆಹಾರ. ಮಾನವರು ಕೂಡ ಮುಖ್ಯವಾಗಿ ಮಕ್ಕಳು ಈ ಬೆರಿ ಹಣ್ಣು ತಿನ್ನುವುದು ಸಹಜ. ಆದರೆ ಈ ಗಿಡ ಸ್ವಲ್ಪ ವಿಷಕಾರಕವಾದುದರಿಂದ ಆನೆಗಳಾಗಲಿ, ದನಗಳಾಗಲಿ, ಸಸ್ಯಾಹಾರಿ ಜೀವಿಗಳಾಗಲಿ ತಿನ್ನುವುದಿಲ್ಲ.


1920ರ ಸುತ್ತಿನಲ್ಲಷ್ಟೆ ಈ ಬಹುವಾರ್ಷಿಕ ಪೊದೆ ಸಸ್ಯವು ದಾಳಿಕೋರನಾಗಿ ಹಬ್ಬುವ ಗುಣ ಹೊಂದಿರುವುದು ತಿಳಿದು ಬಂತು. ಅಲ್ಲದೆ ಅದು ಪೊದೆಯಾಗಿ ಬೆಳೆಯುವಲ್ಲಿ ಬೇರೆ ಸಸ್ಯ ಬೆಳೆಯದಂತೆ ತಡೆಯುವ ದುರ್ಗುಣವೂ ಈ ಲಂಟಾನಕ್ಕೆ ಇದೆ. ಬ್ರಿಟಿಷರು, ಪೋರ್ಚುಗೀಸರು, ಸ್ಪೆಯಿನರು ತಾವು ಹೋದಲ್ಲಿ ಇದನ್ನು ಅಲಂಕಾರಿಕವಾಗಿ ಒಯ್ದರು, ಇದು ಅಲಂಕಾರದೊಂದಿಗೆ ಪರಿಸರ ಜೀವ ವೈವಿಧ್ಯದ ಮೇಲೆಲ್ಲ ಸವಾರಿ ಮಾಡಲಾರಂಭಿಸಿತು. ಈಗ ಅದನ್ನು ಸವರಿ, ಸುಡು ಶಿಕ್ಷೆ ಕೊಟ್ಟು, ಹೊರ ಕೆರೆದು, ನೊಡಲು ಸೊಗಸಾದ ಕುರ್ಚಿ, ಬುಟ್ಟಿಗಳನ್ನೆಲ್ಲ ಬುಡಕಟ್ಟು ಜನರು ಮಾಡುತ್ತಾರೆ. ಲಂಟಾನದಲ್ಲಿ 150ರಷ್ಟು ಜಾತಿಗಳಿವೆ.


ಈ ಲಂಟಾನವನ್ನು ಕಲೆಯಾಗಿಸಿಕೊಂಡ ಕೊರವರು ತೆಂಕಣ ಭಾರತದ ನಾನಾ ಕಡೆ ಇದ್ದಾರೆ. ಇವರನ್ನು ಎರುಕುಲ ಕೊರವ, ಕೊರಚ, ಕೊರ್ರ, ಕೊರಮ, ಎಂದಿತ್ಯಾದಿಯಾಗಿಯೂ ಕರೆಯುತ್ತಾರೆ. ಕರ್ನಾಟಕದಲ್ಲೂ ಇದ್ದರೂ ಆಂಧ್ರ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಹಾರಾಷ್ಟ್ರ, ಕೇರಳದಲ್ಲೂ ಇದ್ದಾರೆ. ಬೆಂಗಳೂರಿನ ಲಂಟಾನ ಆನೆ ಹೆಣೆದ ಇನ್ನೊಂದು ಬುಡಕಟ್ಟು ಜನಾಂಗ ಪೊಲ್ಲಿಯರ್ ಬುಡಕಟ್ಟು ಜನಾಂಗ. ಇವರು ಕರ್ನಾಟಕದಲ್ಲಿ ವಿರಳ. ತಮಿಳುನಾಡಿನ ಪಳನಿ, ಸಿರುಮಲೈ, ಕೋಡೈಕೆನಾಲ್ ಬೆಟ್ಟಗಳಲ್ಲಿ, ಕೇರಳದ ಪಶ್ಚಿಮ ಘಟ್ಟಗಳಲ್ಲಿ ಅಧಿಕವಾಗಿ ಕಾಣಿಸುತ್ತಾರೆ. ಪಲಿಯನ್, ಪಲಿಯರ್ ಎಂದಿತ್ಯಾದಿಯಾಗಿ ಕರೆಯಲ್ಪಡುವ ಇವರ ಬದುಕು ಸಹ ಬೇಟೆ, ಕಾಡುತ್ಪತ್ತಿ ಶೇಖರಿಸುವುದು. ಕಾಡಿನ ಔಷÀಧೀಯ ಸಸ್ಯ ವಸ್ತುಗಳನ್ನು ಸಂಗ್ರಹಿಸಿ ಹಳ್ಳಿ, ನಗರಗಳ ಸಿದ್ದ ವೈದ್ಯರಿಗೆ ಪೂರೈಸುವಲ್ಲಿ ಇವರು ಹಿಂದೆ ತುಂಬ ಈಡುಗೊಂಡಿದ್ದರು. ಆನೆಗಳಂತೆಯೇ ಇವರು ಕೂಡ ತಮ್ಮ ಕಾಡು ಕಳೆದುಕೊಂಡು ಎಲ್ಲೆಲ್ಲೋ ಆಗಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಹಿಂದೆ ತುಂಬ ಪಲಿಯನ್ ಜನರಿದ್ದರು. ಕಾಡು ಹೋಗಿ ಅವರೆಲ್ಲ ಆ ಜಿಲ್ಲೆ ಬಿಟ್ಟಿದ್ದರು ಎನ್ನಲಾಗಿದೆ.


ಹಿಮಯುಗದಲ್ಲಿ ಈಗಿನ ಆನೆಯ ಮೂರ್ನಾಲ್ಕು ಪಟ್ಟು ದೊಡ್ಡ ಹಿಮ ಆನೆಗಳು ಇದ್ದವು. ಅವು ಮೈತುಂಬ ಜೂಲು ಕೂದಲುಗಳನ್ನೂ ಹೊಂದಿದ್ದವು. ಈಗ ಪಳೆಯುಳಿಕೆಗಳಾಗಿ ಸಿಕ್ಕು ನಾವು ಇದ್ದೆವು ಎನ್ನುತ್ತಿವೆ. ಸದ್ಯ ಏಶಿಯಾದ ಮತ್ತು ಆಫ್ರಿಕಾದ ಎಂದು ಎರಡು ಪ್ರಭೇದದ ಆನೆಗಳು ಇವೆ. ಆಫ್ರಿಕಾದ ಆನೆಗಳದು ನಮ್ಮ ಆನೆಗಳಿಗಿಂತ ದೊಡ್ಡದಾದ ತಡ್ಪೆ ಕಿವಿ. ಆಫ್ರಿಕಾದ ಆನೆಗಳಲ್ಲಿ ಹೆಣ್ಣು ಆನೆಗೂ ದಂತ ಇರುತ್ತದೆ. ಇನ್ನು ಮುಂದೆ ಆನೆಗಳು ಇಲ್ಲವಾದಲ್ಲಿ ಲಂಟಾನ ಆನೆಗಳಂತೂ ನಮ್ಮ ಮುಂದಿನ ಜನಾಂಗದವರಿಗೆ ಸಿಗುತ್ತವೆ. ಆನೆ ಸಾಕು ಪ್ರಾಣಿಯೂ ಆಗಿರುವುದರಿಂದ ಅದು ಮಾನವ ಅಳಿದ ಮೇಲೆಯೆ ಅಳಿದರೆ ಅಳಿಯಬಹುದು. ಅದು ಸರಿ ಮಾನವನಿಗೆ ಅಂಕುಶ ಹಾಕುವವರು ಯಾರು?

Related Posts

Leave a Reply

Your email address will not be published.