ಅಮೃತ ಸದೃಶ ಎಳನೀರು

ನೈಸರ್ಗಿಕವಾಗಿ ದೊರಕುವ, ದೇಹದ ಕಾವನ್ನು ತಣಿಸಿ ಬಾಯಾರಿಕೆಯನ್ನು ಇಂಗಿಸಿ, ಮನಸ್ಸಿಗೆ ಉಲ್ಲಾಸ ನೀಡುವ
ಅತೀ ಉತ್ತಮ ಪೇಯವೆಂದರೆ ಅದು ಎಳನೀರು ಎಂದರೆ ಅತಿಶಯೋಕ್ತಿಯಾಗಲಾರದು. ಬಹಳ ಸುಲಭವಾಗಿ ಹಳ್ಳಿ, ನಗರ, ಪೇಟೆ, ಊರು, ಕೇರಿ ಹೀಗೆ ಎಲ್ಲೆಡೆ ಅತೀ ಕಡಿಮೆ ದರಕ್ಕೆ ದೊರಕುವ ಈ ನೈಸರ್ಗಿಕ ಪೇಯವನ್ನು ಅಮೃತ ಸದೃಶ ಪೇಯ ಎಂದೂ ಕರೆಯಲಾಗುತ್ತದೆ. ಇದರಲ್ಲಿ ದೊರಕುವ ವಿಟಮಿನ್, ಖನಿಜಾಂಶ, ಪೋಷಕಾಂಶ ಮತ್ತು ಇತರ ಸಮೃದ್ಧವಾದ ಸೋಡಿಯಂ, ಪೊಟಾಷಿಯಂ ಮುಂತಾದ ಲವಣಗಳಿಂದಾಗಿ, ಎಳನೀರು ಅಮೃತ ಸದೃಶ ಎಂಬ ಅನ್ವರ್ಥನಾಮ ಪಡೆದಿದೆ. ಬೇಸಿಗೆಯಲ್ಲಿ ಬಾಯಾರಿದಾಗ, ದೇಹ ಬಳಲಿದಾಗ, ವಿಪರೀತ ಬೇಸಿಗೆಯಿಂದ ದೇಹದಲ್ಲಿ ನೀರಿನಂಶ ಕಳೆದುಹೋಗಿ ನಿರ್ಜಲೀಕರಣವಾದಾಗ, ಜ್ವರ ಬಂದಾಗ, ವಾಂತಿ ಭೇದಿಯಾಗಿ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಅತಿ ಉತ್ತಮ ನೈಸರ್ಗಿಕ ಪೇಯ ಒಂದಿದ್ದರೆ, ಅದು ‘ಎಳ ನೀರು’ ಆಗಿರುತ್ತದೆ. ಸಾಮಾನ್ಯವಾಗಿ ಯುವ ಜನರು ಮೋಜಿಗಾಗಿ, ಪ್ಯಾಷನ್‍ಗಾಗಿ ಕೃತಕ ತಂಪು ಪಾನೀಯ ಬಳಸುವುದು ಹೆಚ್ಚು ಕಂಡುಬರುತ್ತದೆ. ಆದರೆ ಈ ಕೃತಕ ಪೇಯಗಳಲ್ಲಿ ಹೆಚ್ಚು ರಾಸಾಯನಿಕ ಮತ್ತು ಇತರ ಬಣ್ಣ ಬರುವ ರಾಸಾಯನಿಕಗಳು ಇರುವುದರಿಂದ ಕ್ಯಾನ್ಸರ್‍ಕಾರಕ ಎಂದೂ ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಮೋಜಿಗಾಗಿ ಕೋಕ್, ಪೆಪ್ಸಿ, ರೆಡ್‍ಬುಲ್ ಮುಂತಾದ ಶಕ್ತಿವರ್ಧಕ ಪೇಯಗಳನ್ನು ಕುಡಿಯುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ. ಅಗತ್ಯವಿದ್ದಲ್ಲಿ ಎಳನೀರಿನಂತ ನೈಸರ್ಗಿಕ ಪೇಯ ಸಾವಿರ ಪಟ್ಟು ಉತ್ತಮ ಎಂದೂ ತಿಳಿಸಿರುತ್ತಾರೆ.

ಲಾಭಗಳು:

 1. ಎಳನೀರು ನೈಸರ್ಗಿಕವಾಗಿ ದೊರಕುವ ಅತಿ ಉತ್ತಮ ಪೇಯವಾಗಿದ್ದು, ದೇಹ ನಿರ್ಜಲೀಕರಣದಿಂದ ಬಳಲಿದಾಗ, ಬೇಸಿಗೆಯಲ್ಲಿ ಕೃತಕ ಪೇಯದ ಬದಲಾಗಿ ಯಾವುದೇ ರಾಸಾಯನಿಕ ಇಲ್ಲದ ಎಳನೀರು ಅತೀ ಉತ್ತಮ ಪೇಯವಾಗಿದೆ. ಬಹಳ ಬೇಗನೆ ದೇಹವನ್ನು ಪುನರ್‍ಜಲೀಕರಣ ಮಾಡಿ, ದೇಹವನ್ನು ಬಳಲದಂತೆ ಮಾಡುತ್ತದೆ.
 2. ಹೊಟ್ಟೆಯಲ್ಲಿ ಉರಿ, ಹುಣ್ಣು ಅಥವಾ ಅಜೀರ್ಣ ಅಥವಾ ಇನ್ನಾವುದೆ ಸಮಸ್ಯೆ ಇದ್ದಲ್ಲಿ ನೀರಿನ ಅಥವಾ ಇನ್ನಾವುದೇ ಪೇಯಗಳ ಬದಲು ಎಳನೀರು ಸೇವನೆ ಅತೀ ಉತ್ತಮ. ಬಳಲಿದ ಕರುಳಿನ ಒಳಭಾಗಕ್ಕೆ ಗಾಯ ವಾಸಿಯಾಗಲು ಎಳನೀರು ಉತ್ತಮ ವೇದಿಕೆ ಕಲ್ಪಿಸುತ್ತದೆ. ದೇಹಕ್ಕೆ ಅಗತ್ಯವಿರುವ ಲವಣ, ವಿಟಮಿನ್ ಮತ್ತು ಪೋಷಕಾಂಶ ನೀಡುವುದರ ಜೊತೆಗೆ ಕರುಳಿನ ಗಾಯ ಒಣಗುವಂತೆ ಮಾಡುತ್ತದೆ
 3. ಬೆಸಗೆಯಲ್ಲಿ ವಿಪರೀತ ಬೆವರುವಿಕೆಯಿಂದ ದೇಹದಿಂದ ಲವಣಗಳು ಕಳೆದು ಹೋಗುತ್ತದೆ ಮತ್ತು ವ್ಯಕ್ತಿ ಬಳಲಿ ಬೆಂಡಾಗುತ್ತಾನೆ ಆಗ ಎಳನೀರು ಸೇವಿಸಿದಲ್ಲಿ ಕಳೆದು ಹೋದ ಲವಣಗಳು ಮತ್ತು ವಿಟಮಿನ್‍ಗಳು ದೇಹಕ್ಕೆ ದೊರಕಿ ಹೊಸ ಹೊಮ್ಮಸ್ಸು ಮತ್ತು ಹುರುಪು ದೇಹಕ್ಕೆ ಬರುತ್ತದೆ.
 4. ಮಲಬದ್ಧತೆ ಸಮಸ್ಯೆ ಇರುವವರಲ್ಲಿ ಎಳನೀರು ಬಹಳ ಉತ್ತಮ ಪೇಯವಾಗಿರುತ್ತದೆ. ಮಲಬದ್ಧತೆ ಉಂಟಾದಾಗ, ಕರುಳಿನಲ್ಲಿ ಶೇಖರಣೆಯಾದ ಮಲದಿಂದ ದೇಹಕ್ಕೆ ತೊಂದರೆ ಆಗಬಹುದು. ಎಳನೀರಿನಲ್ಲಿರುವ ಕರಗಿರುವ ನಾರಿನಂಶ ಕರುಳಿನ ಚಲನೆಯನ್ನು ಪ್ರಚೋದಿಸಿ ಮಲವನ್ನು ಹೊರಹಾಕುವಂತೆ ಪ್ರಚೋದಿಸುತ್ತದೆ. ಒಟ್ಟಿನಲ್ಲಿ ನಿಯಮಿತವಾಗಿ, ನಿರಂತರವಾಗಿ ಎಳನೀರು ಸೇವನೆಯಿಂದ ಕರುಳಿನ ಚಲನೆ ಸರಾಗವಾಗಿ ಜೀರ್ಣಾಂಗ ಸಂಬಂಧಿ ಸಮಸ್ಯೆಗಳು ಪರಿಹಾರವಾಗುತ್ತದೆ.
 5. ಎಳನೀರಿನಲ್ಲಿ ಆರ್ಜಿನೈನ್ ಎಂಬ ರಾಸಾಯನಿಕ ಇರುತ್ತದೆ. ಇದು ದೇಹದ ಎಲ್ಲಾ ಆಂತರಿಕ ಅಂಗಾಂಗಗಳಿಗೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಆರೋಗ್ಯ ವೃದ್ದಿಸುವಂತೆ ಮಾಡುತ್ತದೆ
 6. ಎಳನೀರಿನಲ್ಲಿ ಅತಿ ಹೆಚ್ಚು ಪೊಟಾಷಿಯಂ ಇರುವ ಕಾರಣ ಕಿಡ್ನಿಯಲ್ಲಿ ಕಲ್ಲು ಬೆಳೆಯದಂತೆ ಮಾಡುತ್ತದೆ. ಈ ಪೊಟಾಷಿಯಂ ದೇಹದಿಂದ ಹೆಚ್ಚು ಮೂತ್ರ ಹೋಗುವಂತೆ ಮಾಡಿ ಕಿಡ್ನಿಯಲ್ಲಿ ಕಲ್ಲು ಬೆಳೆಯದಂತೆ ತಡೆಯುತ್ತದೆ
 7. ಎಳನೀರಿನಲ್ಲಿ ಕೊಬ್ಬಿನಾಂಶ ಇರುವುದೇ ಇಲ್ಲ ಮತ್ತು ಅತೀ ಕಡಿಮೆ ಕ್ಯಾಲರಿ ಇರುತ್ತದೆ. ನೀರಿನ ಬದಲು ಎಳನೀರು ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗಿ, ದೇಹದ ತೂಕ ಕಳೆಯಲು ಕಾರಣವಾಗುತ್ತದೆ. ಹೆಚ್ಚು ಸೋಡಿಯಂ ಇರುವ ಆಹಾರ ಸೇವಿಸಿ, ದೇಹದಲ್ಲಿ ಹೆಚ್ಚು ನೀರು ಶೇಖರಣೆಯಾದಾಗ, ಎಳನೀರು ಸೇವಿಸಿದಲ್ಲಿ ಈ ಹೆಚ್ಚಾದ ನೀರು ಮೂತ್ರದ ಮುಖಾಂತರ ಹೊರ ಹಾಕಲ್ಪಡುತ್ತದೆ. ಆ ಮೂಲಕ ದೇಹದ ತೂಕ ನಿಯಂತ್ರಿಸುತ್ತದೆ
 8. ಎಳನೀರು ಬಹಳ ಉತ್ತಮ ನೈಸರ್ಗಿಕ ಪೇಯವಾಗಿರುತ್ತದೆ. ವಿಟಮಿನ್, ಖನಿಜಾಂಶ ಮತ್ತು ಲವಣಾಂಶ ಇರುವ ಕಾರಣದಿಂದ ಸಣ್ಣ ಮಕ್ಕಳಲ್ಲಿಯೂ ಬಳಸಬಹುದು. ಇದು ಅತೀ ಉತ್ತಮ ಪೇಯುವಾಗಿದ್ದು, ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.
 9. ಎಳನೀರು ಒಂದು ಉತ್ತಮ ಪೇಯುವಾಗಿದ್ದು, ದೇಹದಲ್ಲಿನ ವಿಷಕಾರಕ ವಸ್ತುಗಳನ್ನು ಹೊರಹಾಕುತ್ತದೆ. ರಕ್ತವನ್ನು ಪರಿಶುದ್ದವಾಗಿಸುತ್ತದೆ. ಅದೇ ರೀತಿ ಕರುಳಿನಲ್ಲಿ ಶೇಖರಣೆಯಾದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ.
 10. ಉರಿಯೂತವನ್ನು ನಿಯಂತ್ರಿಸುವಲ್ಲಿ ಎಳನೀರು ಅತ್ಯಂತ ಉತ್ತಮ ಪೇಯವಾಗಿರುತ್ತದೆ. ದೇಹದ ಯಾವುದೇ ಭಾಗದಲ್ಲಿ ಉರಿಯೂತವಾಗಿದ್ದರೆ ಎಳನೀರು ಸೇವನೆಯಿಂದ ಗಾಯ ಬೇಗನೆ ಗುಣವಾಗುತ್ತದೆ. ಆಂತರಿಕವಾಗಿ ಉಂಟಾದ ಗಾಯಗಳನ್ನು ಶಮನಿಸಲು ಎಳನೀರು ಬಹಳ ಉಪಯುಕ್ತ ಎಂದು ಸಾಬೀತಾಗಿದೆ.
  ಕೊನೆಮಾತು:
  ಎಳನೀರಿನಲ್ಲಿ ಶೇಕಡಾ 94 ರಷ್ಟು ನೀರು ಇರುತ್ತದೆ. ಅತೀ ಕನಿಷ್ಟ ಪ್ರಮಾಣದಲ್ಲಿ ಕೊಬ್ಬಿನಾಂಶ ಇರುತ್ತದೆ. ಒಂದು ಕಪ್ ಅಂದರೆ 240ml ಎಳನೀರಿನಲ್ಲಿ ಸುಮಾರು 60 ಕ್ಯಾಲರಿ ಮಾತ್ರ ಇರುತ್ತದೆ. ಇದರ ಜೊತೆಗೆ 15 ಗ್ರಾಂ ನಷ್ಟು ಶರ್ಕರಪಿಷ್ಟ, 5ಗ್ರಾಂ ನಷ್ಟು ಸಕ್ಕರೆ ಇರುತ್ತದೆ. ಇದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಮ್ಯಾಗ್ನೀಷಿಯಂ, ಪೊಟಾಷಿಯಂ ಕ್ಯಾಲ್ಸಿಯಂ ಮತ್ತು ರಂಜಕ ಕೂಡ ಇರುತ್ತದೆ. ಆಂಟಿ ಆಕ್ಸಿಡೆಂಟ್‍ಗಳು ಸಾಕಷ್ಟು ಇರುವ ಕಾರಣ ಎಳನೀರು ಅತ್ಯಂತ ಉಪಯುಕ್ತ ಪೇಯವಾಗಿದೆ. ಮಧುಮೇಹಿಗಳಲ್ಲಿ ಎಳನೀರು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕರಿಸುತ್ತದೆ ಎಂದು ತಿಳಿದು ಬಂದಿದೆ. ಎಳನೀರಿನಲ್ಲಿರುವ ಮ್ಯಾಗ್ನೀಷಿಯಂ ಜೀವಕೋಶಗಳು ಇನ್ಸುಲೀನ್ ರಸದೂತಗಳಿಗೆ ಕೆರಳುವಂತೆ ಮಾಡಿ ಪ್ರಚೋದಿಸಿ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಎಂದು ಅಂದಾಜಿಸಲಾಗಿದೆ. ಎಳನೀರಿನಲ್ಲಿರುವ ಪೊಟಾಷಿಯಂ ಕೂಡ ರಕ್ತದೊತ್ತಡ ನಿಯಂತ್ರಿಸಿ ಹೃದಯ ಸಂಬಂಧಿ ರೋಗ ಬರದಂತೆ ತಡೆಯುತ್ತದೆ ಎಂದು ತಿಳಿದು ಬಂದಿದೆ. ಅತಿಯಾದ ದೈಹಿಕ ಕಸರತ್ತು, ವ್ಯಾಯಾಮ ಅಥವಾ ಇನ್ಯಾವುದೇ ದೈಹಿಕ ಪರಿಶ್ರಮ ಇರುವ ಕೆಲಸ ಮಾಡಿದ ಬಳಿಕ ಜೀವ ಕೋಶಗಳನ್ನು ಉತ್ತೇಜಿಸಲು ಮತ್ತು ಬಳಲಿದ ದೇಹಕ್ಕೆ ಶಕ್ತಿ ತುಂಬಲು ನೈಸರ್ಗಿಕವಾಗಿ ದೊರಕುವ ಶಕ್ತಿವರ್ಧಕ ಪೇಯ ಎಂದರೆ ಎಳನೀರು ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ವ್ಯಾಯಾಮದಲ್ಲಿ ಸೋರಿ ಹೋದ ನೀರು ಮತ್ತು ಲವಣಗಳನ್ನು ಪುನಃ ಪಡೆಯಲು ಎಳನೀರು ಎಂದೂ ಅಧ್ಯಯನಗಳಿಂದ ಸಾಬೀತಾಗಿದೆ. ಒಟ್ಟಿನಲ್ಲಿ ಎಳನೀರು ಎನ್ನುವ ನಿಸರ್ಗದಲ್ಲಿ ಕಡಿಮೆ ಖರ್ಚಿಗೆ ಸಿಗುವ ನೈಸರ್ಗಿಕ ಪೇಯವಾಗಿದೆ. ಅತೀ ಹೆಚ್ಚು ನೀರು, ನಾರು, ವಿಟಮಿನ್, ಖನಿಜ, ಪೋಷಕಾಂಶ ಮತ್ತು ಇತರ ಅಂಶಗಳನ್ನು ಹೊಂದಿರುವ ಅಮೃತ ಸದೃಶ ಪೇಯ ಎಂದು ಸಾಬೀತಾಗಿದೆ. ಈ ಕಾರಣದಿಂದಲೇ ಎಲ್ಲಾ ಕೃತಕ ರಾಸಾಯನಿಕ ಯುಕ್ತ ಪೇಯಗಳನ್ನು ವರ್ಜಿಸಿ, ಎಳನೀರು ದಿನನಿತ್ಯ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಡಾ|| ಮುರಲೀ ಮೋಹನ್ ಚೂಂತಾರು
  MDS,DNB,MOSRCSEd(U.K), FPFA, M.B.A
  ಸುರಕ್ಷಾದಂತ ಚಿಕಿತ್ಸಾಲಯ
  ಹೊಸಂಗಡಿ – 671 323
  ಮೊ : 9845135787

Related Posts

Leave a Reply

Your email address will not be published.