ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯ ಕುಂದಾಪುರ ವಕೀಲರಿಂದ ಪತ್ರ ಚಳವಳಿ
ಕುಂದಾಪುರ: ಕರಾವಳಿಯಲ್ಲಿ ಹೈಕೋರ್ಟ್ ಸ್ಥಾಪನೆಗೆ ಒತ್ತಾಯಿಸಿ ದ.ಕ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಕೀಲರ ಸಂಘಗಳಿಂದ ನಡೆಯುತ್ತಿರುವ ಅಂಚೆ ಕಾರ್ಡ್ ಚಳವಳಿಯ ಭಾಗವಾಗಿ ಕುಂದಾಪುರದಲ್ಲೂ ಪತ್ರ ಚಳವಳಿ ಶುಕ್ರವಾರ ನಡೆಯಿತು.
ಬಹುಕಾಲದ ಬೇಡಿಕೆಗೆ ಎಲ್ಲಾ ಪಕ್ಷಗಳ ನಾಯಕರೂ ಬೆಂಬಲ ನೀಡಿದ್ದಾರೆ. ಈ ಭಾಗದಿಂದ ಬಹಳಷ್ಟು ವ್ಯಾಜ್ಯಗಳು ಕೋರ್ಟ್ಗೆ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿ ವಿಚಾರಣೆಗೂ ಬೆಂಗಳೂರಿಗೆ ತೆರಳುವುದರಿಂದ ಖರ್ಚು ವೆಚ್ಚಗಳು ಹೆಚ್ಚಾಗಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಭಾಗದ 6,000 ಪ್ರಕರಣಗಳು ಹೈಕೋರ್ಟ್ನಲ್ಲಿವೆ. ಧಾರವಾಡ, ಕಲಬುರ್ಗಿ ಮಾದರಿಯಲ್ಲಿ ಕರಾವಳಿಯಲ್ಲೂ ಹೈಕೋರ್ಟ್ ಪೀಠವಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಕುಂದಾಪುರ ಬಾರ್ಎಸೋಸಿಯೇಷನ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.
ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಕೋಶಾಧಿಕಾರಿ ಐ.ನಾಗರಾಜ್ ರಾವ್, ವಕೀಲರಾದ ಕೆ.ಸಿ.ಶೆಟ್ಟಿ, ಕೆ.ಬಿ.ಶೆಟ್ಟಿ, ಕೊತ್ತಾಡಿ ಉದಯ್ಕುಮಾರ ಶೆಟ್ಟಿ, ರಂಜಿತ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಇಡೂರು, ಸಚ್ಚಿದಾನಂದ ಎಂ.ಎಲ್, ಅಶೋಕ್ ಶೆಟ್ಟಿ ಹಂದಕುಂದ, ಸಜನ್, ದಿವ್ಯಾ, ಸಂಗೀತಾ, ಜಗದೀಶ್, ಕುಮಾರಸ್ವಾಮಿ, ಕುಮಾರ ನಾಯ್ಕ, ರಶ್ಮಿತಾ, ಸರಿತಾ, ಹೇಮಲತಾ ಇದ್ದರು.


















