ಕಡಿಮೆ ರಕ್ತದ ಒತ್ತಡ ಕಾರಣಗಳೇನು ?

ಕಡಿಮೆ ರಕ್ತದ ಒತ್ತಡ ಕಾರಣಗಳೇನು ?
( Low Blood Pressure… Reasons and Simple Solutions)

ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು ಪುರುಷರಲ್ಲಿ ರಕ್ತದ ಒತ್ತಡವು 120/80 ಮಿಲಿ ಮೀಟರ್‍ನಷ್ಟು (ಪಾದರಸ ಕಂಬದ ಎತ್ತರ) ಇರುತ್ತದೆ. ವಯಸ್ಸಾದಂತೆಲ್ಲ 50ರ ಹರೆಯದ ನಂತರ ಸುಮಾರು 130/90 ಮಿಲಿ ಮೀಟರ್‍ನಷ್ಟು ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ದೇಹದ ತೂಕ, ಎತ್ತರ, ಗಾತ್ರ ಅಂಗಗಳಿಗೆ ಅನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆ ಇರಲೂ ಬಹುದು. ಆದರೆ ರಕ್ತದ ಒತ್ತಡ 90/60 ಮಿಲಿ ಮೀಟರ್‍ಗಳಿಗಿಂತಲೂ ಕಡಿಮೆಯಾದಾಗ ಅದನ್ನು ಕಡಿಮೆ ರಕ್ತದ ಒತ್ತಡ ಎಂದು ಕರೆಯುತ್ತೇವೆ. ಕಡಿಮೆ ರಕ್ತದ ಒತ್ತಡದಿಂದಾಗಿ ದೇಹದ ಪ್ರಮುಖ ಅಂಗಗಳಾದ ಕಿಡ್ನಿ, ಹೃದಯ, ಮೆದುಳು, ಕಣ್ಣು, ಶ್ವಾಸಕೋಶ, ಯಕೃತ್ತ್ ಮುಂತಾದ ಅಂಗಗಳಿಗೆ ರಕ್ತದ ಸರಬರಾಜಿನಲ್ಲಿ ವ್ಯತ್ಯಯವಾಗಿ ದೀರ್ಘಕಾಲಿಕ ತೊಂದರೆಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ. ಹೀಗೆ ಅಧಿಕ ರಕ್ತದೊತ್ತಡ ದೇಹದ ಅಂಗಗಳಿಗೆ ಹೇಗೆ ತೊಂದರೆ ಮಾಡುತ್ತದೆಯೋ, ಅದೇ ರೀತಿ ಕಡಿಮೆ ರಕ್ತದ ಒತ್ತಡ ಕೂಡ ಅಂಗಾಂಗಗಳ ಕಾರ್ಯಕ್ಷಮತೆಗೆ ಅಡ್ಡಿ ಮಾಡಿ ಹಾನಿಗೊಳಿಸುತ್ತದೆ. ದೇಹದ ರಕ್ತದ ಒತ್ತಡ ಕಡಿಮೆಯಾದಾಗ ರಕ್ತದ ಮುಖಾಂತರ ಜೀವಕೋಶಗಳಿಗೆ ಸರಿಯಾದ ಆಮ್ಲಜನಕ, ಪೋಷಕಾಂಶ ತಲುಪದೇ ಇರಬಹುದು. ಜೀವಕೋಶಗಳ ಕಾರ್ಯದಕ್ಷತೆಯನ್ನು ಉಳಿಸಿಕೊಳ್ಳಲು ನಿರಂತರವಾದ ಆಮ್ಲಜನಕ ಮತ್ತು ಶಕ್ತಿಯ ಪೂರೈಕೆ ಅತೀ ಅಗತ್ಯ ಇಲ್ಲವಾದಲ್ಲಿ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ.

ಕಡಿಮೆ ರಕ್ತದ ಒತ್ತಡಕ್ಕೆ ಕಾರಣಗಳು ಏನು ?

 1. ಅತೀವ ರಕ್ತಸ್ರಾವವಾದಾಗ ರಕ್ತದ ಒತ್ತಡ ಕಡಿಮೆಯಾಗುತ್ತದೆ. ನಮ್ಮ ದೇಹದಲ್ಲಿ 5ರಿಂದ 6 ಲೀಟರ್ ರಕ್ತವಿರುತ್ತದೆ. ಅಪಘಾತಗಳಾಗಿ ರಕ್ತಸ್ರಾವವಾಗಿ 1ಲೀಟರ್‍ಗಳಿಗಿಂತಲೂ ಹೆಚ್ಚು ರಕ್ತ ಸೋರಿದಾಗ ರಕ್ತದೊತ್ತಡ ಕಡಿಮೆಯಾಗುತ್ತದೆ.
 2. ನಿರ್ಜಲೀಕರಣದಿಂದಾಗಿಯೂ ರಕ್ತದೊತ್ತಡ ಕಡಿಮೆಯಾಗುತ್ತದೆ. ಅತಿಸಾರ, ವಾಂತಿ, ಬೇದಿಯಿಂದಾಗಿ ದೇಹದಲ್ಲಿನ ದ್ರವಗಳು ಸೋರಿ ಹೋಗಿ ಶರೀರವು ನಿರ್ಜಲೀಕರಣಗೊಂಡು ರಕ್ತದೊತ್ತಡ ಕಡಿಮೆಯಾಗುತ್ತದೆ.
 3. ಗುರಾಣಿ ಗ್ರಂಥಿ (ಥೈರಾಯಿಡ್ ಗ್ರಂಥಿ)ಯ ಕಾರ್ಯದಕ್ಷತೆಯು ಕ್ಷೀಣಿಸಿದಾಗ ಈ ಗ್ರಂಥಿಗಳಿಂದ ಸ್ರವಿಸಲ್ಪಡುವ ರಸದೂತಗಳಲ್ಲಿ ಏರುಪೇರಾದಾಗ ರಕ್ತದೊತ್ತಡ ಕಡಿಮೆಯಾಗುತ್ತದೆ. ಹೆಪೋಥೈರಾಯಿಡಿಸಮ್ ಎಂಬ ಕಾಯಿಲೆಯಲ್ಲಿ ಕಡಿಮೆ ರಕ್ತದೊತ್ತಡ ಇರುತ್ತದೆ.
 4. ರಕ್ತದಲ್ಲಿ ತೀವ್ರತರವಾದ ಸೋಂಕು ತಗುಲಿ ದೇಹದೆಲ್ಲೆಡೆ ಸೋಂಕು ಹರಡಿದಾಗ ರಕ್ತದೊತ್ತಡ ಕಡಿಮೆಯಾಗುತ್ತದೆ.
 5. ಮಧುಮೇಹಿಗಳಲ್ಲಿ ಗ್ಲೂಕೋಸ್ ಅಂಶ ಕಡಿಮೆಯಾದಾಗ ರಕ್ತದೊತ್ತಡದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.
 6. ಗರ್ಭಾವಸ್ಥೆಯ ಮೊದಲ ತಿಂಗಳಲ್ಲಿ ರಕ್ತದಲ್ಲಿ ಪ್ರೋಜೆಸ್ಟರಾನ್ ಎಂಬ ರಸದೂತ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ರಕ್ತದೊತ್ತಡ ಕಡೆಯಾಗುವ ಸಾಧ್ಯತೆ ಇದೆ.
 7. ವಿಪರೀತ ರಕ್ತಹೀನತೆ ಇರುವವರಲ್ಲಿ ಕಡಿಮೆ ರಕ್ತದೊತ್ತಡವೂ ಇರುವ ಸಾಧ್ಯತೆ ಇದೆ.
 8. ಹೃದಯಾಘಾತವಲ್ಲದೆ ಹೃದಯದ ಮಾಂಸಖಂಡಗಳಿಗೆ ಹಾನಿಯಾದಾಗ ಹೃದಯದ ರಕ್ತ ಹೊರಹಾಕುವ ಸಾಮಥ್ಯ ಕುಂದಿ ಹೋಗಿ ರಕ್ತದೊತ್ತಡ ಕಡಿಮೆಯಾಗುತ್ತದೆ
 9. ಅತಿಯಾದ ಮಧ್ಯಪಾನ ಅಥವಾ ಅತಿಯಾದ ಔಷಧಿ ಸೇವನೆಯಿಂದಲೂ ರಕ್ತದೊತ್ತಡ ಕಡಿಮೆಯಾಗುತ್ತದೆ.
 10. ದೇಹದ ಉಷ್ಣತೆ ಕಡಿಮೆಯಾದಾಗಲೂ ರಕ್ತದೊತ್ತಡ ಕಡಿಮೆಯಾಗಬಹುದು.
 11. ರಕ್ತದ ಒತ್ತಡ ಕಡಿಮೆ ಮಾಡುವ ಔಷಧಿಗಳನ್ನು ಅತಿಯಾಗಿ ಸೇವಿಸಿದಲ್ಲಿ ರಕ್ತದೊತ್ತಡ ಕುಸಿಯಬಹುದು.
 12. ಮೂತ್ರಪಿಂಡದ ವೈಫಲ್ಯವಾದಾಗಲೂ ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆ ಇದೆ.

ಲಕ್ಷಣಗಳು ಏನು ?

 1. ಕಣ್ಣು ಮಂಜಾಗುವುದು, ನಡೆದಾಡಲು ಕಷ್ಟವಾಗಬಹುದು, ತಲೆತಿರುಗಿ ಬೀಳುವಂತಾಗುವುದು.
 2. ವಿಪರೀತ ಸುಸ್ತು, ಆಯಾಸವಾದಂತೆ ಆಗುವುದು.
 3. ಉಸಿರಾಡಲು ತೊಂದರೆ, ಶರೀರದ ಚರ್ಮ ಬಿಳಿಚಿಕೊಳ್ಳುವುದು, ಮೂರ್ಛೆ ಹೋದಂತೆ ಅನಿಸುವುದು.
 4. ಬೆವರುವುದು, ವಾಂತಿ ಬಂದಂತಾಗುವುದು.
 5. ತಲೆನೋವು, ಕುತ್ತಿಗೆ ಹಿಡಿದಂತಾಗುವುದು.
 6. ಎದೆಯ ಬಳಿ ನೋವು, ತೋಳುಗಳ ಸುತ್ತ ನೋವು ಕಾಣಿಸಬಹುದು.
 7. ಹೃದಯದ ಬಡಿತದಲ್ಲಿ ಏರುಪೇರಾಗಬಹುದು.
 8. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದಲ್ಲಿ. ಅಪಸ್ಮಾರ ಉಂಟಾಗಿ, ಮತಿ ತಪ್ಪಬಹುದು.

ತಾತ್ಕಾಲಿಕ ಚಿಕಿತ್ಸೆ ಹೇಗೆ ?

ತಲೆ ಸುತ್ತಿದಾಗ ತಕ್ಷಣವೇ ನೀರಿಗೆ ಸ್ವಲ್ಪ ಗ್ಲೂಕೋಸ್ ಮತ್ತು ಉಪ್ಪನ್ನು ಬೆರೆಸಿ ಸೇವಿಸತಕ್ಕದ್ದು. ಉಪ್ಪಿನ ಬಿಸ್ಕತ್ ತಿನ್ನಬೇಕು ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ದ್ರವಾಹಾರ ಸೇವಿಸಬೇಕು. ತಕ್ಷಣವೇ ಸ್ಥಳೀಯ ವೈದ್ಯರ ಬಳಿ ತೋರಿಸಿ ರಕ್ತದೊತ್ತಡ ಕಡಿಮೆಯಾಗಲು ಕಾರಣ ತಿಳಿದು ಚಿಕಿತ್ಸೆ ಪಡೆಯತಕ್ಕದ್ದು.

ತಡೆಗಟ್ಟುವುದು ಹೇಗೆ ?

1) ಪ್ರತಿ ಆರು ತಿಂಗಳಿಗೊಮ್ಮೆ ವೈದ್ಯರ ಬಳಿ ತಪಾಸಣೆ ನಡೆಸಬೇಕು. ತಲೆ ಸುತ್ತುವುದು, ಉಸಿರಾಟದ ತೊಂದರೆ ಸುಸ್ತು ಇದ್ದಲ್ಲಿ ತಕ್ಷಣವೇ ವೈದ್ಯರ ಭೇಟಿ ಅತಿ ಅವಶ್ಯಕ.
2) ಸಾಕಷ್ಟು ಪ್ರಮಾಣದಲ್ಲಿ ಉಪ್ಪು, ಲವಾಣಾಂಶವಿರುವ ಆಹಾರ ಸೇವಿಸತಕ್ಕದ್ದು. ಸಾಕಷ್ಟು ದ್ರವ್ಯಾಹಾರವನ್ನು ಸೇವಿಸತಕ್ಕದ್ದು.
3) ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಮದ್ಯಪಾನದಿಂದಾಗಿ ನಿರ್ಲಜಲೀಕರಣವಾಗಿ ರಕ್ತದೊತ್ತಡ ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ.
4) ರಕ್ತ ಹೀನತೆ ಕೂಡ ಕಡಿಮೆ ರಕ್ತದೊತ್ತಡಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ. ಸಾಕಷ್ಟು ಪೋಷಕಾಂಶ, ಪೌಷ್ಠಿಕಾಂಶ ಇರುವ ಹಣ್ಣು ತರಕಾರಿ ಮತ್ತು ಆಹಾರವನ್ನು ಸೇವಿಸಬೇಕು.

ಕೊನೆ ಮಾತು:

ನಮ್ಮ ದೇಹದ ಮುಖ್ಯ ಅಂಗಗಳಾದ ಹೃದಯ, ಮೆದುಳು, ಮೂತ್ರಪಿಂಡ, ಯಕೃತ್ತಿಗೆ ನಿರಂತರವಾಗಿ ಆಮ್ಲಜನಕ ಮತ್ತು ಪೋಷಕಾಂಶ ರಕ್ತದ ಮೂಲಕ ಪೂರೈಕೆಯಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದಲ್ಲಿ, ಸೂಕ್ತ ಪ್ರಮಾಣದಲ್ಲಿ ಪೌಷ್ಠಿಕಾಂಶ ದೊರಕದೇ ಸಾಕಷ್ಟು ತೊಂದರೆಗಳು ಉದ್ಭವಿಸುತ್ತದೆ. ಕಡಿಮೆ ರಕ್ತದೊತ್ತಡ, ಅಧಿಕ ರಕ್ತದೊತ್ತಡಷ್ಟು ಮಾರಾಣಾಂತಿಕವಲ್ಲದಿದ್ದರೂ, ನಿಧಾನವಾಗಿ ಎಲ್ಲಾ ಅಂಗಗಳನ್ನು ಹಾಳುಗೆಡವಿ ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕಾಗಿ ಕಾಲಕಾಲಕ್ಕೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಂಡಲ್ಲಿ ಮುಂದೆ ಬರುವ ಅನಾಹುತಗಳನ್ನು ಪರಿಣಾಮಕಾರಿಯಾಗಿ ಪಡೆಯಬಹುದು ಮತ್ತು ಅದರಲ್ಲಿಯೇ ಜಾಣತನ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon
[email protected]
9845135787
www.surakshadental.com

Related Posts

Leave a Reply

Your email address will not be published.