ಗುಕೇಶ್ ದೊಮ್ಮರಾಜು ಲೋಕ ದಾಖಲೆ ಬಾಲಕ

ಗುಕೇಶ್ ಎಂಬ ಹದಿನೇಳರ ಭಾರತದ ಬಾಲಕನು ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಆಗಿ ಇತಿಹಾಸ ಬರೆದಿದ್ದಾನೆ. 17 ಸುತ್ತಿನ ಹೋರಾಟದಲ್ಲಿ ಗುಕೇಶ್ ದೊಮ್ಮರಾಜು ಅತಿ ಚಿಕ್ಕ ಎಂದರೆ 17 ವರುಷ ಹತ್ತು ತಿಂಗಳಲ್ಲಿ ಫಿಡೆ 2024ರ ಕ್ಯಾಂಡಿಡೇಟ್ಸ್ ವಿಜಯಿಯಾಗಿದ್ದಾನೆ. ಆ ಮೂಲಕ ಗುಕೇಶ್‍ಗೆ ಚೆಸ್ ವಿಶ್ವ ಚಾಂಪಿಯನ್ ಜೊತೆ ಸ್ಪರ್ಧಿಸಿ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಲು ಬಾಗಿಲು ತೆರೆದಂತಾಗಿದೆ.


ರಶಿಯಾದ ಗ್ಯಾರಿ ಕಾಸ್ಪರೋವ್ 20 ವರುಷ 11 ತಿಂಗಳಲ್ಲಿ, ನಾರ್ವೆಯ ಮ್ಯಾಗ್ನಸ್ ಕಾರ್ಲ್‍ಸನ್ 22 ವರುಷ 2 ತಿಂಗಳಲ್ಲಿ, ರಶಿಯಾದ ಮಿಕಾಯಿಲ್ ತಲ್ 22 ವರುಷ 11 ತಿಂಗಳಲ್ಲಿ, ರಶಿಯಾದ ಅನಾತೋಲಿ ಕಾರ್ಪೋವ್ 23 ವರುಷ 5 ತಿಂಗಳಲ್ಲಿ ಮತ್ತು ಭಾರತದ ವಿಶ್ವನಾಥನ್ ಆನಂದ್ 25 ವರುಷ 3 ತಿಂಗಳಲ್ಲಿ ಕ್ಯಾಂಡಿಡೇಟ್ಸ್ ಪ್ರಶಸ್ತಿ ಗೆದ್ದಿದ್ದ ಕಿರಿಯರು ಎನ್ನುವ ದಾಖಲೆ ಬರೆದವರಾಗಿದ್ದಾರೆ.


ಫೆಡರೇಶನ್ ಇಂಟರ್‍ನ್ಯಾಶನಲ್ ಡೆಸ್ ಎಚೆಸ್ ಎಂಬುದರ ಸಣ್ಣ ರೂಪವೇ ಫಿಡೆ; ಇದು ಲೋಕ ಚೆಸ್ ಒಕ್ಕೂಟವಾಗಿದೆ. ಈ ಫಿಡೆ ಚೆಸ್ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ. ಫಿಡೆ ಅಂಕಗಳನ್ನು ನೀಡಿ ಚೆಸ್ ಆಟಗಾರರ ಸ್ಥಾನಗಳನ್ನು ನಿರ್ಧರಿಸುತ್ತದೆ. 1950ರಿಂದ ಇದು ಆಡಳಿತ ಮಂಡಳಿಯೊಡನೆ ಚಾಲ್ತಿಯಲ್ಲಿದೆ. ಅದಕ್ಕೆ ಮೊದಲು ಸಣ್ಣ ಮಟ್ಟದಲ್ಲಿ ಅಲ್ಲಲ್ಲಿ ಸಂಸ್ಥೆಗಳು ಇದ್ದವು. 1883ರಲ್ಲಿ ಲಂಡನ್ ಚೆಸ್ ಟೂರ್ನ್‍ಮೆಂಟ್ ಆರಂಭಿಸಿದ ಜೋಹಾನ್ನೆಸ್ ಜುಕರ್‍ಪೋರ್ಟ್ ಮತ್ತು ವಿಲ್ಹೆಮ್ ಸ್ಟೆನಿಜ್ ಇದಕ್ಕೆಲ್ಲ ಅಡಿಪಾಯ ಹಾಕಿದವರು ಎಂದು ಹೇಳಬಹುದು.
ಚತುರಂಗ ಬಲದೊಡನೆ ಯುದ್ಧ ಮಾಡುವ ರೀತಿಯಲ್ಲಿ ಈ ಆಟ ಇರುವುದು ವಿಶೇಷ. ಅಲೆಗ್ಸಾಂಡರನು ಕುದರೆ ಪಡೆಯೊಡನೆ ದಾಳಿ ಮಾಡಿದಾಗ ಆನೆ ಪಡೆಯ ಪುರೂರವನ ಸೇನೆ ನಿಲ್ಲದಾಯಿತು ಎನ್ನುವುದು ಇಹಿಹಾಸ. ಹಿಂದೆ ಆನೆಗಳು ಜಗತ್ತಿನಲ್ಲಿ ಎಲ್ಲ ಇದ್ದವು. ಈಗ ಆಫ್ರಿಕಾ ಮತ್ತು ಏಶಿಯಾದಲ್ಲಿ ಇವೆ. ಹಾಗಾಗಿ ಚೆಸ್‍ನಲ್ಲಿ ಬರುವ ಚತುರಂಗ ಬಲದ ದಾಳಿಯಲ್ಲಿ ಆನೆ ಸೇನೆಯೂ ಇದೆ. ಹಾಗಾಗಿ ಈ ಆಟ ಎಲ್ಲಿ ಹುಟ್ಟಿತು ಎಂಬ ಬಗೆಗೆ ಗೋಜಲನ್ನು ಇಟ್ಟು ಮುನ್ನಡೆದಿದೆ.


ಒಂದೂವರೆ ಸಾವಿರ ವರುಷಗಳ ಹಿಂದೆ ಚೆಸ್ ಎನ್ನುವುದು ಚತುರಂಗ ಎಂಬ ಹೆಸರಿನಲ್ಲಿ ಭಾರತದಲ್ಲಿ ಹುಟ್ಟಿರಬಹುದು ಎಂದು ಒಂದು ಲೆಕ್ಕಾಚಾರ. ಇದು ಊಹೆಯಷ್ಟೆ. ಇಲ್ಲಿಂದ ಪರ್ಶಿಯಾ ಮತ್ತು ಯೂರೋಪಿಗೆ ಹಬ್ಬಿತೆನ್ನುವುದು ಕೂಡ ಊಹೆಯ ಆಧಾರದ ಇತಿಹಾಸ. ಆನೆಗಳು ಆ ಕಡೆಯೂ ಇದ್ದವು ಎಂಬುದನ್ನು ಅಲ್ಲಗಳೆಯಲಾಗದು. ಅಲ್ಲದೆ ವಿಶ್ವ ಇತಿಹಾಸವು ಚೆಸ್ ಪರ್ಶಿಯಾ ಮೂಲದ ಆಟ ಎಂದು ಹೇಳುತ್ತದೆ. ಅಲ್ಲಿನ ಶಾ ಎಂಬ ಅರಸು ನುಡಿಯಿಂದ ಚೆಸ್ ಬಂದಿದೆ ಎಂದು ವಿವರಿಸುತ್ತದೆ. ಅರಾಬಿಕ್‍ನಲ್ಲಿ ಶಾ ಮತ್ ಎಂದರೆ ಆಟದಲ್ಲಿ ಅರಸನನ್ನು ಅಸಹಾಯಕನಾಗಿಸುವುದೇ ಆಟದ ಗೆಲುವಾಗಿದೆ. ಆ ಶಾ ಮತ್ ಎಂಬುದೇ ಚೆಸ್ ರೂಪ ತಾಳಿದೆಯಂತೆ.


ಒಟ್ಟಾರೆ ಈ ಆಟವು ಎರಡು ಅರಸೊತ್ತಿಗೆಗಳ ನಡುವಣ ಕದನವನ್ನು ಆಟದಲ್ಲೇ ಮುಗಿಸಿಬಿಡುತ್ತದೆ. ಇನ್ನು ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಗ್ಯಾರಿ ಕ್ಯಾಸ್ಪರೋವ್ ಮತ್ತು ಇಮ್ಯಾನುವೆಲ್ ಲಸ್ಕರ್ ಅವರುಗಳು ತಲಾ ಆರು ಬಾರಿ ಚಾಂಪಿಯನ್ ಆಗಿದ್ದಾರೆ. ಮ್ಯಾಗ್ನಸ್ ಕಾರ್ಲ್‍ಸನ್ ಮತ್ತು ಮಿಕಾಯೆಲ್ ಬೋತ್ನಿವಿಕ್ ತಲಾ ಐದು ಬಾರಿ ಗೆದ್ದಿದ್ದಾರೆ. ಕ್ಯಾಂಡಿಡೇಟ್ಸ್ ಹಿಂದೆ ಗೆದ್ದಿರುವ ಭಾರತೀಯರೆಂದರೆ ಒಬ್ಬರು ಮಾತ್ರ. ಅವರು ವಿಶ್ವನಾಥನ್ ಆನಂದ್. ಅವರು 2007, 2008, 2010, 2012ನೇ ಇಸವಿಗಳಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿ ಚಾಂಪಿಯನ್ ಆಗಿದ್ದರು ಈಗ ಗುಕೇಶ್ ದೊಮ್ಮರಾಜು ಇತಿಹಾಸ ಬರೆದಿದ್ದಾರೆ.


ಗುಕೇಶ್ ಒಮ್ಮಗೇ ಈ ಸಾಧನೆಗೇರಿದ್ದಲ್ಲ. 12ರ ಪ್ರಾಯದಿಂದಲೂ ಆತ ವಿಶ್ವ ಚೆಸ್‍ನಲ್ಲಿ ತನ್ನ ಛಾಪು ಮೂಡಿಸುತ್ತಲೇ ಬರುತ್ತಿದ್ದಾನೆ. ಚೆಸ್ ಗ್ರಾಂಡ್‍ಮಾಸ್ಟರ್ ಪದವಿಗೇರಿದ ಭಾರತದ ಅತಿ ಕಿರಿಯ ಎನ್ನುವ ಸಾಧನೆಯನ್ನು 12ರ ಪ್ರಾಯದಲ್ಲಿ ಆತ ಮಾಡಿದ್ದಾನೆ. ಚೆಸ್ ದಿಗ್ಗಜರಲ್ಲೊಬ್ಬರಾದ ಮ್ಯಾಗ್ನಸ್ ಕಾರ್ಲ್‍ಸನ್‍ರನ್ನು ಅತಿ ಚಿಕ್ಕ ಪ್ರಾಯದಲ್ಲಿ ಸೋಲಿಸಿ ಎಲ್ಲರನ್ನು ಅಚ್ಚರಿಗೆ ದೂಡಿದ್ದ. ಅತಿ ಚಿಕ್ಕ ಪ್ರಾಯದಲ್ಲಿ 2,750 ಫಿಡೆ ರೇಟಿಂಗ್ ತಲುಪಿದ ದಾಖಲೆಯನ್ನು ಬರೆದಿರುವನು. ಈಗ ಕ್ಯಾಂಡಿಡೇಟ್ಸ್ ಪ್ರಶಸ್ತಿ ಗೆದ್ದ ವಿಶ್ವದ ಅತಿ ಕಿರಿಯ ಎಂಬ ಕೊಂಬು.


ಭಾರತದಲ್ಲಿ ಚೆಸ್ ಸಾಧನೆಯಲ್ಲಿ ಚೆನ್ನೈಗೆ ಮೊದಲ ಸ್ಥಾನ. ದೇಶದ ಗ್ರಾಂಡ್ ಮಾಸ್ಟರ್‍ಗಳಾದವರಲ್ಲಿ 36 ಶೇಕಡಾ ಚೆಸ್ ಆಟಗಾರರು ತಮಿಳುನಾಡಿನವರು, ಅದರಲ್ಲೂ ಮುಖ್ಯವಾಗಿ ಚೆನ್ನೈನವರು. ಸೊವಿಯೆತ್ ರಶಿಯಾದ ನೆರವಿನಿಂದ ಚೆನ್ನೈನಲ್ಲಿ 50 ವರುಷಗಳ ಹಿಂದೆ ಆರಂಭವಾಗಿದ್ದ ದ ತಲ್ ಕ್ಲಬ್ ಚೆಸ್ ತರಬೇತಿ ಕೇಂದ್ರವು ಇದಕ್ಕೆಲ್ಲ ತಾಯಿ ಸ್ಥಾನದಲ್ಲಿದೆ ಎಂದು ಹೇಳಬಹುದು. ಇದೀಗ ಚೆನ್ನೈನಲ್ಲಿ 60ಕ್ಕೂ ಹೆಚ್ಚು ಚೆಸ್ ತರಬೇತಿ ಕೇಂದ್ರಗಳು ಇವೆ. ಸ್ಪರ್ಧಾಳುಗಳ ಬ್ಲಿಟ್ಜ್ ಮತ್ತು ರ್ಯಾಪಿಡ್ ಶೈಲಿಗೆ ಮಾರು ಹೋಗದ ಗುಕೇಶ್, ಕಂಪ್ಯೂಟರ್‍ನ ತರಬೇತಿಗೆ ತಲೆ ಕೊಡದೆ ಸೂಕ್ತ ತರಬೇತುದಾರರಿಂದ ಸಾಂಪ್ರದಾಯಿಕ ಶೈಲಿಯಲ್ಲಿ ತರಬೇತಿ ಪಡೆದದ್ದು ಹೆಚ್ಚಿನ ಯಶಸ್ಸನ್ನು ನೀಡಿದೆ ಎಂದು ಹೇಳಬಹುದು. ಡಾ. ರಜನಿಕಾಂತ್ ಮತ್ತು ಡಾ. ಪದ್ಮಕುಮಾರಿ ಎಳವೆಯಲ್ಲೇ ಮಗನಿಗೆ ಚೆಸ್ ತರಬೇತಿ ಕೊಡಿಸಿದ್ದು ಇದರಲ್ಲಿನ ಅತಿ ಮುಖ್ಯ ಅಂಶ ಮತ್ತು ತಿರುವಾಗಿದೆ.
ಚೆಸ್‍ನಲ್ಲಿ ಬಿಳಿ ಮತ್ತು ಕಪ್ಪು ಕಾಯಿಗಳು ಬಳಕೆಯಾಗುವುದರಿಂದ ಇದನ್ನು ಯೂರೋಪು ಆಫ್ರಿಕಾ ಸ್ಪರ್ಧೆಯ ಒಂದು ಮಾದರಿ ಎಂದು ವ್ಯಾಖ್ಯಾನಿಸುವವರೂ ಇದ್ದಾರೆ. ಇವೆಲ್ಲದರ ನಡುವೆ ಚೀನಾದ ಚೆಸ್ ಎನ್ನುವ ಒಂದು ಬಗೆಯೇ ಇದೆ. ಎಲ್ಲ ಚೆಸ್‍ಗಳಿಗೆ ಅದೇ ಮೂಲ ಎನ್ನುವವರೂ ಇದ್ದಾರೆ. 8 ಗುಣಿಸು 8ರ 64 ಚೌಕಗಳಲ್ಲಿ ಆಡುವ ಆಟವಿದು. ಅಲ್ಲದೆ ನಾವು ಆನೆ ಎನ್ನುವುದನ್ನು ಯೂರೋಪಿಯನರು ರೂಕ್ ಎಂದರೆ ಮೋಸಗಾರ ಎನ್ನುತ್ತಾರೆ. ಪಾವ್ನ್, ನೈಟ್, ಬಿಶಪ್ ಇತ್ಯಾದಿ ಹೆಸರುಗಳು ಅವರಲ್ಲಿ ಬಳಕೆಯಲ್ಲಿ ಇರುವುದರಿಂದ ನಮ್ಮ ಚತುರಂಗ ಶಬ್ದಕ್ಕೆ ಅಲ್ಲಿ ನೆಲೆ ಸಿಗುವುದಿಲ್ಲ. ಆದರೆ ಯುದ್ಧೋಪಾದಿಯ ಆಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.


1997ರಿಂದ ಚೆಸ್ ಆಡುವ ಯಂತ್ರಗಳು ಬಂದಿವೆ; ಈಗ ಆಧುನಿಕತೆ ಗಳಿಸಿಕೊಂಡಿವೆ. ಯಂತ್ರದೆದುರು ಮಾನವನ ಸ್ಪರ್ಧೆ ಎನ್ನುವುದು ಕೂಡ ಆಧುನಿಕ ಚೆಸ್‍ನ ವಿಶೇಷಗಳಲ್ಲಿ ಒಂದಾಗಿದೆ. ದಿನವಿಡೀ ಯಾಂತ್ರಿಕವಾಗಿ ಆಡುವ ಆಟ ಎಂದರೂ ಇದರಲ್ಲಿ ತಲೆಗೆ ಸಾಕಷ್ಟು ಕೆಲಸ ಇದೆ.


ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.