ಮೂಡುಬಿದಿರೆ : ಜ.26ರಂದು ಮೂಡುಬಿದಿರೆಯಲ್ಲಿ ‘ಮಾನವ ಸರಪಳಿ’
ಎಸ್.ಕೆ.ಎಸ್.ಎಸ್.ಎಫ್ ದ.ಕ.ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಜ.26 ರಂದು ಮೂಡುಬಿದಿರೆಯಲ್ಲಿ ‘ಮಾನವ ಸರಪಳಿ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ವರ್ಷ ಜ.26 ಗಣರಾಜ್ಯೋತ್ಸವದಂದು ಜಿಲ್ಲಾ ವ್ಯಾಪ್ತಿಯಲ್ಲಿ ‘ಮಾನವ ಸರಪಳಿ’ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಈ ವರ್ಷ ಕೂಡಾ ಮೂಡುಬಿದಿರೆಯಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನ 2-30ರಿಂದ 4 ಗಂಟೆಯವರೆಗೆ ಮೂಡುಬಿದಿರೆ ಲಾಡಿ ಮಸೀದಿ ಬಳಿಯಿರುವ ಸ್ವರಾಜ್ಯ ಮೈದಾನದವರೆಗೆ ದಫ್, ಸ್ಕೌಟ್ ಹಾಗೂ ಫ್ಲವರ್ ಶೋ ಒಳಗೊಂಡ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದವರು ಹೇಳಿದರು.
ದ.ಕ.ಜಿಲ್ಲಾ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ಉಸ್ಮಾನ್ ಫೈಝಿ ತೋಡಾರ್, ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ರೆ.ಫಾ.ವಿನ್ಸೆಂಟ್ ಡಿಸೋಜ ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಆಳ್ವಾಸ್ ಸಂಸ್ಥೆಗಳ ಮುಖ್ಯಸ್ಥ ಡಾ.ಮೋಹನ ಆಳ್ವ ಅವರನ್ನು ಸನ್ಮಾನಿಸಲಾಗುವುದು. ಎಸ್.ವೈ.ಎಸ್. ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ದಾರಿಮಿ ಅವರು ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.
ಎಮ್.ಜಿ.ಮುಹಮ್ಮದ್ ಹಾಜಿ ತೋಡಾರ್, ಅಬ್ದುಲ್ ಅಝೀಝ್ ಮಾಲಿಕ್, ಅಬೂಸಾಲಿ ಫೈಝಿ ಅಕ್ಕರಂಗಡಿ, ಅಶ್ರಫ್ ಮರೋಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.