ಕಾರ್ಕಳ: ಜ.21ರಿಂದ 26ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕೋತ್ಸವ
ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಜ. 21ರಿಂದ 26ರ ವರೆಗೆ ನಡೆಯಲಿದ್ದು, 6 ದಿನಗಳ ಉತ್ಸವದ ಅವಧಿಯಲ್ಲಿ ಕೊಂಕಣಿ ಭಾಷೆಯಲ್ಲಿ 45, ಕನ್ನಡ ಭಾಷೆಯಲ್ಲಿ 3 ಒಟ್ಟು 48 ಬಲಿ ಪೂಜೆಗಳು ನಡೆಯಲಿದೆ ಎಂದು ಸಂತ ಲಾರೆನ್ಸರ ಬಸಿಲಿಕ ಧರ್ಮಗುರು ಅಲ್ಬನ್ ಡಿಸೋಜಾ ಹೇಳಿದರು.
ಅವರು ಕಾರ್ಕಳ ಅತ್ತೂರು ಚರ್ಚ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವಧರ್ಮದ ಏಕತೆಯ ಹಬ್ಬವಾಗಿದ್ದು, ನಾಡಿನ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಿದ್ದು ಭಕ್ತರ ಅನುಕೂಲತೆಗಾಗಿ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಪವಾಡ ಮೂರ್ತಿ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೆಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ. 2025 ಜುಬಿಲಿ ವರ್ಷ ಕೂಡ ಆಗಿದ್ದು ಪ್ರಾರ್ಥನ ವರ್ಷವಾಗಿ ಆಚರಿಸಲಾಗುತ್ತಿದೆ ಎಂದರು.
ಜ.21ರ ಸಾಯಂಕಾಲ 4.30ಕ್ಕೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪ|ಪೂ| ಆಲೋಶಿಯಸ್ ಪಾವ್ಲ್ ಡಿಸೋಜಾ, ಜ. 22 ರಂದು ಸಾಯಂಕಾಲ ೬.ಕ್ಕೆ (ಕನ್ನಡ) ಶಿವಮೊಗ್ಗದ ಧರ್ಮಾಧ್ಯಕ್ಷ ಪ|ಪೂ| -ಫ್ರಾನ್ಸಿಸ್ ಸೆರಾವೊ, ಜ.23 ರಂದು ಸಾಯಂಕಾಲ 5.30ಕ್ಕೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ಪ|ಪೂ| ಜೀವರ್ಗಿಸ್ ಮಾರ್ ಮಕಾರಿಯೊಸ್, ಜ. 24 ರಂದು ಬೆಳಗ್ಗೆ10ಕ್ಕೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ಪ|ಪೂ| ಜೆರಾಲ್ಡ್ ಐಸಾಕ್ ಲೋಬೊ, ಜ. 25ರಂದು ಬೆಳಗ್ಗೆ 10.೦೦ಕ್ಕೆ (ಕೊಂಕಣಿ) ಮಂಗಳೂರಿನ ಧರ್ಮಾಧ್ಯಕ್ಷ ಪ|ಪೂ| ಪೀಟರ್ ಪಾವ್ಲ್ ಸಲ್ಡಾನ್ಹಾ, ಜ. 26ರಂದು ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ, ಬಲಿಪೂಜೆ ಬೆಳಗ್ಗೆ 10ಕ್ಕೆ (ಕನ್ನಡ) ಬೆಳ್ತಂಗಡಿ ಧರ್ಮಾಧ್ಯಕ್ಷ ಪ|ಪೂ| ಲೊರೆನ್ಸ್ ಮುಕ್ಕುಝಿ ಅವರು ಪ್ರಧಾನ ಯಾಜಕರಾಗಿ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಿಸಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಆಧ್ಯಾತ್ಮ ಧರ್ಮಗುರು ರೋಮನ್ ಮಸ್ಕರೇನಸ್, ಸಹಾಯಕ ಧರ್ಮಗುರು ಲ್ಯಾರಿ ಪಿಂಟೋ, ಪಾಲನಾ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಸದಸ್ಯರಾದ ವಂದೀಶ್ ಮಥಾಯಿಸ್, ಪ್ರಕಾಶ್ ಪಿಂಟೋ, ರಿತೇಶ್ ಪಿಂಟೋ, ರೋಶನ್ ಸಾಲಿಸ್ ಮತ್ತಿತರರು ಉಪಸ್ಥಿತರಿದ್ದರು.