ಉದ್ಯೋಗ, ಶಿಕ್ಷಣ, ಆರೋಗ್ಯ, ಬೆಲೆಯೇರಿಕೆ ಚುನಾವಣೆಯ ವಿಷಯವಾಗಲಿ ; ಕರಾವಳಿಯಲ್ಲಿ ಬಿಜೆಪಿ ಸೋಲಿಸಲು ಬರಹಗಾರರು, ಚಿಂತಕರ ಕರೆ

ಸದಾ ಕೋಮುಹಿಂಸೆಯಿಂದ ನಲುಗುವ ಕರಾವಳಿ ಜಿಲ್ಲೆಗಳಲ್ಲಿ ನಿರುದ್ಯೋಗ, ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣದಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಬಿಜೆಪಿ ಪರಿವಾರದ ಮತೀಯ ರಾಜಕಾರಣದಿಂದ ಮಂಗಳೂರು ಸಹಿತ ಕರಾವಳಿ ಪ್ರದೇಶಗಳು ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ. ಕಲೆ, ಸಂಸ್ಕೃತಿ, ಜನಪರ ಹೋರಾಟಗಳಿಂದ ಸಮೃದ್ದವಾಗಿದ್ದ ಮಂಗಳೂರು ಈಗ ಹಿಂದು, ಮುಸ್ಲಿಂ ವಿಭಜನೆಯ ರಾಜಕಾರಣದ ಮಸಿ ಮೆತ್ತಿಸಿಕೊಂಡಿದೆ. ಕರಾವಳಿಯ ಬ್ಯಾಂಕ್ ಗಳು ವಿಲೀನದ ಹೆಸರಿನಲ್ಲಿ ಕೈ ತಪ್ಪಿದೆ. ವಿಮಾನ ನಿಲ್ದಾಣ, ಬಂದರುಗಳು ಖಾಸಾಗಿಯವರಿಗೆ ಹಸ್ತಾಂತರಗೊಂಡಿದೆ.

ಸ್ಥಳೀಯ ವಿದ್ಯಾವಂತ ಯುವಜನರು ಉದ್ಯೋಗ ಅರಸಿ ಗುಳೇ ಹೋಗುತ್ತಿದ್ದಾರೆ. ಮತ್ತೊಂದೆಡೆ ನರೇಂದ್ರ ಮೋದಿ ನಾಯಕತ್ವದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ದೇಶದ ಮೇಲೆ ಹೇರಲಾಗಿದೆ. ಪ್ರಶ್ನಿಸುವ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಜಾತ್ಯಾತೀತತೆ, ಪ್ರಜಾಪ್ರಭುತ್ವ ಅಪಾಯಕ್ಕೆ ಗುರಿಯಾಗಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ವಿಧಾನ ಸಭೆ ಚುನಾವಣೆ ನಾಡಿನ ಭವಿಷ್ಯದ ನಿಟ್ಟಿನಲ್ಲಿ ನಿರ್ಣಾಯಕವಾಗಿದೆ. ಈ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳ ಜನತೆ ಕೋಮುವಾದದ ರಾಜಕಾರಣವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯನ್ನು ಸೋಲಿಸಲು ಮುಂದಾಗಬೇಕು, ಹಾಗೂ ನಿರುದ್ಯೋಗ, ಶಿಕ್ಷಣ, ಆರೋಗ್ಯ, ಬೆಲೆಯೇರಿಕೆಯ ವಿಷಯಗಳು ಚುನಾವಣೆಯ ಫಲಿತಾಂಶವನ್ನು ತೀರ್ಮಾನಿಸುವಂತೆ ಮಾಡಬೇಕು ಎಂದು ನಗರದ ಖಾಸಗಿ ಸಭಾಂಗಣದಲ್ಲಿ ಸಭೆ ಸೇರಿದ ಮಂಗಳೂರಿನ ಬರಹಗಾರರ, ಚಿಂತಕರ, ಸಾಮಾಜಿಕ ಕಾರ್ಯಕರ್ತರು ಮಂಗಳೂರಿನ ಜನತೆಯಲ್ಲಿ ಮನವಿ ಮಾಡಿದರು.

ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಚಿಂತಕರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಂಗಳೂರಿನ ಹಲವು ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ವ್ಯಾಪಕ ಚರ್ಚೆಯ ನಂತರ ಬಿಜೆಪಿ ಸೋಲಿಸಲು ಕರೆ ನೀಡುವ, ಜಾತ್ಯಾತೀತ ಪಕ್ಷಗಳ ಬಲಿಷ್ಟ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸುವ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಯಿತು. ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ನರೇಂದ್ರ ನಾಯಕ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ,ಎರಿಕ್ ಲೋಬೋ, ನಿವೃತ್ತ ಪೊಲೀಸ್ ಅಧಿಕಾರಿ ಟಿಸಿಎಂ ಶರೀಫ್, ರಿಯಾಝ್ ಬಂಟ್ವಾಳ, ಸಾಮಾಜಿಕ ಚಿಂತಕರಾದ ಆಸುಂತಾ ಡಿಸೋಜ,ಫ್ಲೇವಿ ಕ್ರಾಸ್ತಾ, ಕ್ವೀನೀ ಪರ್ಸಿ ಆನಂದ್,ಪ್ರಭಾಕರ್ ಕಾಪಿಕಾಡ್,ರಘುರಾಜ್, ಡಾ.ವಸಂತ ಕುಮಾರ್, ಶಿವಾನಂದ್ ಕೋಡಿ,ಆಶಾ ಬೋಳೂರು,ಪಟ್ಟಾಭಿರಾಮ ಸೋಮಯಾಜಿ,ಲಕ್ಷ್ಮಣ್ ವಾಮಂಜೂರು,ವಿನೀತ್ ದೇವಾಡಿಗ, ಜೆ ಇಬ್ರಾಹಿಂ, ಮುರಳೀಧರ್,ಬೆನೆಟ್ ಅಮ್ಮನ್ನ,ಸದಾಶಿವ ಬಂಗೇರ,, ಸಮುದಾಯದ ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ,ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಟಿ ಆರ್ ಭಟ್, ರಮೇಶ್ ಉಳ್ಳಾಲ್, ಪ್ರವೀಣ್ ಬಂಟ್ವಾಳ್ ಮುಂತಾದವರು ಭಾಗವಹಿಸಿದ್ದರು.