ಬೆಳ್ತಂಗಡಿ: ಕೆ. ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಾಪ
ಬೆಳ್ತಂಗಡಿ: ಹಿರಿಯ ರಾಜಕಾರಣಿ ಮಾಜಿ ಶಾಸಕ ಶ್ರೀ ಕೆ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಪ್ರಮುಖ ಮೂರು ರಾಜಕೀಯ ಪಕ್ಷಗಳಡಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದ ಜಿಲ್ಲೆಯ ಏಕೈಕ ರಾಜಕಾರಣಿ ವಸಂತ ಬಂಗೇರರಾಗಿದ್ದು, ಪಕ್ಷಾತೀತವಾಗಿ ಜನತೆ ಅವರನ್ನು ಬೆಂಬಲಿಸಿದುದರ ನಿದರ್ಶನವಾಗಿದೆ. ಪ್ರಜಾಪ್ರಭುತ್ವಕ್ಕೆ ಕರಾಳವಾಗಿ ಜಾರಿಯಾಗಿದ್ದ ತುರ್ತುಪರಿಸ್ಥಿತಿ ವಿರುದ್ಧ ವಸಂತ ಬಂಗೇರರ ಹೋರಾಟ, 1983-85ರ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಜನತೆ ಮಂಗನ ಖಾಯಿಲೆಯಿಂದ ತತ್ತರಿಸಿದಾಗ ಮಿಡಿದ ಅವರ ಸಹೃದಯಿ ಮನ. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಅವರು ನಡೆಸಿದ ಜಾಥಾ ಇಂದಿಗೂ ಜನತೆಯ ಮನದಲ್ಲಿ ಹಚ್ಚ ಹಸಿರು.
ಅವರ ನಿಧನ ವೈಯಕ್ತಿಕವಾಗಿಯೂ ತಾಲೂಕಿನ ಜನತೆಗೂ ಅಪಾರ ದುಃಖವನ್ನು ತಂದಿದ್ದು, ದಿವಂಗತರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶಾಸಕ ಹರೀಶ್ ಪೂಂಜ ತನ್ನ ನುಡಿನಮನ ಸಲ್ಲಿಸಿರುತ್ತಾರೆ.