ಮಂಗಳೂರಿನಲ್ಲಿ ಮಣಿಪುರ ಹಿಂಸಾಚಾರ ಖಂಡಿಸಿ ಕಥೋಲಿಕ್ ಸಭಾದ ನೇತೃತ್ವದಲ್ಲಿ ಪ್ರತಿಭಟನೆ
ಮಣಿಪುರದ ಹಿಂಸಾಚಾರವನ್ನು ನಿಲ್ಲಿಸಿ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ನೀಡಲು ಕೇಂದ್ರ ಸರ್ಕಾರ ವಿಫಲವಾದರೆ ದೆಹಲಿ ಮತ್ತು ಮಣಿಪುರ ಚಲೋ ನಡೆಸಲಾಗುವುದು ಎಂದು ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೊ ಎಚ್ಚರಿಕೆ ನೀಡಿದರು.
ಕಥೋಲಿಕ್ ಸಭಾದ ನೇತೃತ್ವದಲ್ಲಿ ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗ, ಕ್ರೈಸ್ತ ಐಕ್ಯತೆಯ ಆಯೋಗ, ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್‍ನ ಸಹಭಾಗಿತ್ವಲ್ಲಿ ನಗರದ ಪುರಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.`ಮಣಿಪುರದಲ್ಲಿ ನಡೆಯುತ್ತಿರುವ ಬೆಳವಣಿಗೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಲ್ಲಿನ ಹಿಂಸಾಚಾರ, ದೌರ್ಜನ್ಯದ ವಿರುದ್ಧ ಜಗತ್ತಿನಾದ್ಯಂತ ಜನರು ಧ್ವನಿ ಎತ್ತಿದ ಪ್ರಧಾನಿ ಪ್ರಧಾನಿ ತುಟಿಬಿಚ್ಚಿರುವುದು ವಿಪರ್ಯಾಸವಾಗಿದೆ. ಪ್ರಧಾನಿ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಭರವಸೆ ಇಲ್ಲ. ಹೀಗಾಗಿ ಹೋರಾಟ ಮುಂದುವರಿಸಲಿದ್ದೇವೆ. ಅಲ್ಲಿ ಕೆಡವಿರುವ ಮನೆ, ಶಾಲೆಗಳನ್ನು ಮತ್ತೆ ಕಟ್ಟಿ, ಇತಿಹಾಸ ಸೃಷ್ಟಿಸುತ್ತೇವೆ’ ಎಂದರು.
ರಾಜ್ಯ ದಾರಿಮೀಸ್ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್‍ಬಿ ಮುಹಮ್ಮದ್ ದಾರಿಮಿ ಮಾತನಾಡಿ `ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಪ್ರತಿಭಟನೆಗಳು ಹಿತವಲ್ಲ. ಆದರೆ, ಮಣಿಪುರ ಸಹಿತ ದೇಶದಾದ್ಯಂತ ನಡೆಯುವ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ' ಎಂದರು.
ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಮಾತನಾಡಿ, ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳಬೇಕಾಗಿದೆ ಎಂದರು. ವಿದ್ಯಾರ್ಥಿ ಡೇವಿಡ್ ಅಲ್ಲಿನ ಘಟನೆಗಳನ್ನು ಹಂಚಿಕೊಂಡರು.
ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರು ಮೋನ್ಸಿಜೋರು ಮ್ಯಾಕ್ಸಿಮ್ ನೊರೊನ್ಹಾ, ಮಾಜಿ ಸಚಿವ ರಮಾನಾಥ ರೈ, ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ಜೆ.ಬಿ. ಸಲ್ದಾನ, ಅಧ್ಯಕ್ಷ ಆಲ್ವಿನ್ ಡಿಸೋಜ, ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೊ, ಮಾಜಿ ಅಧ್ಯಕ್ಷ ಪೌಲ್ ರೋಲ್ಫಿ, ಉಪಾಧ್ಯಕ್ಷ ಲಾರೆನ್ಸ್ ಡಿಸೋಜ, ಜಮಾತೆ ಇಸ್ಲಾಮಿ ಹಿಂದ್‍ನ ಜಿಲ್ಲಾ ಸಂಚಾಲಕ ಅಮೀನ್ ಹಸನ್, ಮಹಿಳಾ ವಿಭಾಗದ ಅಧ್ಯಕ್ಷೆ ಸಾಜಿದಾ ಮೂಮಿನ್, ಸಾಲಿಡಾರಿಟಿ ಯೂತ್ ಮೂವ್‍ಮೆಂಟ್‍ನ ಜಿಲ್ಲಾ ಘಟಕದ ಅಧ್ಯಕ್ಷ ನಿಝಾಮುದ್ದೀನ್ ಉಮರ್ ಇದ್ದರು.