ಮಂಗಳೂರು : ಅಕ್ಟೋಬರ್ 15ರಿಂದ 25ರ ವರೆಗೆ ನಡೆಯಲಿರುವ – ಮಂಗಳೂರು ದಸರಾ-2023

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ-2023 ನವರಾತ್ರಿ ಮಹೋತ್ಸವವು ಅಕ್ಟೋಬರ್ 15ರಿಂದ 25 ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಎಚ್. ಎಸ್ ಸಾಯಿರಾಂ ಹೇಳಿದರು. ಅವರು ಕುದ್ರೋಳಿ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ದಸರಾ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಕುದ್ರೋಳಿ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾವೂ ಮೈಸೂರು ದಸರಾ ಕಾರ್ಯಕ್ರಮದಂತೆ ನಡೆಯುತ್ತಿದ್ದು, ಅ.15 ರಿಂದ 23 ರ ವರೆಗೆ ಪ್ರತಿದಿನ ಸಂಜೆ ರಾಜ್ಯದ ಖ್ಯಾತ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಇದೆ. 24ರಂದು ವರ್ಷಂಪ್ರತಿಯಂತೆ ಶ್ರೀ ಕ್ಷೇತ್ರದಿಂದ ವಿಜೃಂಭಣೆಯ ದಸರಾ ಮೆರವಣಿಗೆಯು ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ಮಾತನಾಡಿ, ಈ ಬಾರಿಯ ದಸರಾ ಮಹೋತ್ಸವಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದ್ದು, ಅ.15 ರಂದು ಬೆಳಿಗ್ಗೆ 11.15 ಗಂಟೆಗೆ ನವದುರ್ಗೆಯರ ಹಾಗೂ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾಗೆ ಚಾಲನೆ ಸಿಗಲಿದೆ. ಈ ಬಾರಿಯ ವಿಶೇಷವಾಗಿ ಮಂಗಳೂರಿನ ಖ್ಯಾತ ಫಿಟ್‍ನೆಸ್ ಕ್ಲಬ್‍ಗಳ ಸಹಯೋಗದೊಂದಿಗೆ ಮ್ಯಾರಥಾನ್ ಹಾಗೂ ದ.ಕ ಫೋಟೋಗ್ರಾಫರ್ ಅಸೋಸಿಯೇಶನ್‍ನ ವತಿಯಿಂದ ರಾಜ್ಯ ಮಟ್ಟದ ಫೋಟೋಗ್ರಫಿ ಮತ್ತು ವಿಡಿಯೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯ ಸರ್ಕಾರದ ಹಲವಾರು ಮಂತ್ರಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಿತಿಯ ಉಪಾಧ್ಯಕ್ಷರಾದ ಉರ್ಮಿಳ ರಮೇಶ್, ಕಾರ್ಯದರ್ಶಿ ಬಿ.ಮಾದವ ಸುವರ್ಣ, ದೇವಸ್ಥಾನದ ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಎಂ.ಶೇಖರ್ ಪೂಜಾರಿ, ಜಗದೀಪ್ ಸುವರ್ಣ, ಸಂತೋಷ್ ಕುಮಾರ್ ಜೆ, ಕೆ.ಮಹೇಶ್ಚಂದ್ರ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷರಾದ ಡಾ.ಅನುಸೂಯ ಬಿ.ಟಿ.ಸಾಲ್ಯಾನ್, ಉಪಾಧ್ಯಕ್ಷರಾದ ಡಾ.ಬಿ.ಜಿ.ಸುವರ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.