ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿ ಬಿಗಿ ಬಂದೋಬಸ್ತ್‍ನಲ್ಲಿ ಗಣೇಶೋತ್ಸವ ಆಚರಣೆ

ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವಕ್ಕೆ ಕೇಳಿಬಂದ ಅಪಸ್ವರಗಳ ನಡುವೆಯೂ ಅದೇ ಸ್ಥಳದಲ್ಲಿ ಉಪಕುಲಪತಿಗಳ ಸಮಕ್ಷಮದಲ್ಲಿ ಪರಿಸರಪೂರಕ ಗಣೇಶನ ವಿಗ್ರಹವನ್ನಿಟ್ಟು ಗಣೇಶೋತ್ಸವ ಆಚರಣೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಕೊಣಾಜೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ನಸುಕಿನ ಜಾವ ಬಂದೋಬಸ್ತ್ ನಡುವೆ ಗಣೇಶನ ವಿಗ್ರಹವನ್ನು ಮಂಗಳ ಸಭಾಂಗಣಕ್ಕೆ ತರಲಾಯಿತು. ಪರಿಸರ ಪೂರಕವಾಗಿ ಬಣ್ಣವಿಲ್ಲದ ಸಣ್ಣ ಗಾತ್ರದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ತಳಿರು ತೋರಣಗಳ ಮೂಲಕ ವೇದಿಕೆಯನ್ನು ಅಲಂಕೃತಗೊಳಿಸಲಾಗಿತ್ತು. ಸ್ಥಳೀಯ ಅರ್ಚಕ ಸುದರ್ಶನ್ ಭಟ್ ನೇತೃತ್ವದಲ್ಲಿ ನಡೆದ ಗಣಹೋಮದಲ್ಲಿ ಉಪಕುಲಪತಿಗಳು ಕುಳಿತು ಭಾಗವಹಿಸಿ, ನಂತರ ಕುಲಸಚಿವರು, ಉಪಕುಲಪತಿಗಳು ಸೇರಿಕೊಂಡು ಗಣೇಶನ ಪ್ರತಿಷ್ಠಾಪನೆ ನಡೆಸಿದರು.

ವೈದಿಕ ಕಾರ್ಯಕ್ರಮದುದ್ದಕ್ಕೂ ಉಪಕುಲಪತಿಗಳೇ ಕುಳಿತು ಪೂಜೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದವರನ್ನು ಶಾಲು ತೆಗೆದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿ.ವಿ ಆಡಳಿತ ಆದೇಶಿಸಿತು. ಅದರಂತೆ ಕೇಸರಿ ಶಾಲು ಬಿಟ್ಟು ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.

ಗಣೇಶೋತ್ಸವದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ, ಸತೀಶ್ ಕುಂಪಲ, ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ಗೀತಾ ದಾಮೋದರ್, ಉಪಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್, ಮಾಜಿ ಅಧ್ಯಕ್ಷೆ ಚಂಚಲಾಕ್ಷಿ, ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರ್ ಮುಂತಾದವರು ಉಪಸ್ಥಿತರಿದ್ದರು. ಬಂದೋಬಸ್ತ್ ನಲ್ಲಿ ಡಿಸಿಪಿ ಸಿದ್ದಾರ್ಥ್ ಗೋಯಲ್, ಎಸಿಪಿ ಪಿ.ಎ ಹೆಗ್ಡೆ, ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್‍ಸುಂದರ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಮುಂತಾದವರು ಭಾಗಿಯಾಗಿದ್ದರು.

Related Posts

Leave a Reply

Your email address will not be published.