ಮೂಡುಬಿದಿರೆ: ಕಂಬಳ ಸಮಾಲೋಚನಾ ಸಭೆ, ಸಾಧಕರಿಗೆ ಸನ್ಮಾನ
ಮೂಡುಬಿದಿರೆ : ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಮೂಡುಬಿದಿರೆಯ ಕಡಲಕೆರೆ ಬಳಿಯಿರುವ ಸೃಷ್ಠಿ ಗಾರ್ಡನ್‍ನಲ್ಲಿ ಕಂಬಳದ ಈ ಋತುವಿನ ಸಮಾಲೋಚನಾ ಸಭೆ ನಡೆಯಿತು.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೋಣದ ಯಜಮಾನರುಗಳಿಗೆ, ವ್ಯವಸ್ಥಾಪಕರಿಗೆ ಹಾಗೂ ತೀರ್ಪುಗಾರರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ನಂತರ ಮಾತನಾಡಿದ ಡಾ.ದೇವಿಪ್ರಸಾದ್ ಶೆಟ್ಟಿ ಅವರು, ಯಾವುದೇ ಗೊಂದಲಗಳಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಏಕ ಮನಸಿನಿಂದ ಕಂಬಳವನ್ನು ಮುನ್ನಡೆಸಬೇಕಾಗಿದೆ ಎಂದ ವೈಯಕ್ತಿಕವಾಗಿ ಕಂಬಳದ ಬಗ್ಗೆ ಯಾರೂ ಕೂಡಾ ಮಾಧ್ಯಮದ ಮುಂದೆ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಠಿಸಬಾರದು ಎಂದು ಮನವಿ ಮಾಡಿದರು.
ಸಮಿತಿಯ ಗೌರವಾಧ್ಯಕ್ಷ ಗುಣಪಾಲ ಕಡಂಬ, ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಚಂದ್ರ ಆಳ್ವ, ಸಾಂಪ್ರಾದಾಯಿಕ ಕಂಬಳಗಳ ಬೈಂದೂರು ವಲಯದ ಅಧ್ಯಕ್ಷ ವೆಂಕಟ ಪೂಜಾರಿ, ಕಂಬಳದ ವ್ಯವಸ್ಥಾಪಕರಾದ ಅನಿಲ್ ಶೆಟ್ಟಿ, ತೀರ್ಪುಗಾರ ವಿಜಯಕುಮಾರ್ ಕಂಗಿನ ಮನೆ ಉಪಸ್ಥಿತರಿದ್ದರು.