ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯ ಅನಾವರಣಕ್ಕೆ ಪತ್ರಿಕೆಯು ಉತ್ತಮ ವೇದಿಕೆಯಾಗಲಿ- ಅಭಯಚಂದ್ರ ಜೈನ್
ಮೂಡುಬಿದಿರೆ : ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ದ್ವೈಮಾಸಿಕ ಪತ್ರಿಕೆ “ವಾಯ್ಸ್ ಆಫ್ ವೈಬ್ರೆಂಟ್”ನ ಬಿಡುಗಡೆ ಸಮಾರಂಭವು ಸೋಮವಾರ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಾಯ್ಸ್ ಆಫ್ ವೈಬ್ರೆಂಟ್ ಪತ್ರಿಕೆಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಕೌಶಲವನ್ನು ಬರವಣಿಗೆಯ ರೂಪದಲ್ಲಿ ಈ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಸಂಸ್ಥೆಯು ತಮಗೆ ಒದಗಿಸಿರುವ ಈ ಒಂದು ಉತ್ತಮ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಪಿಯುಸಿ ಶಿಕ್ಷಣವು ತಮ್ಮ ಬದುಕನ್ನು ಬದಲಾಯಿಸುವ ಪ್ರಧಾನಘಟ್ಟವಾಗಿದೆ. ಪೋಷಕರು ಕಠಿಣ ಪರಿಶ್ರಮದಿಂದ ಸಂಪಾದಿಸಿದ ಹಣವನ್ನು ನಿಮ್ಮ ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದಾರೆ ಅದನ್ನು ಚೆನ್ನಾಗಿ ಅರಿತು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ ನೀವು ಆಯ್ಕೆಮಾಡಿಕೊಳ್ಳುವ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು ಎಂದ ಅವರು ಈ ಪತ್ರಿಕೆಯು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಸೃಜನಶೀಲ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಾಯ್ಸ್ ಆಫ್ ವೈಬ್ರೆಂಟ್ ಸಾಧಾರಣ ಪತ್ರಿಕೆಯಲ್ಲ. ಮಕ್ಕಳ ಉತ್ತಮ ಭವಿಷ್ಯಕ್ಕೆ ಅಗತ್ಯ ಸಂದೇಶಗಳನ್ನು ನೀಡುವ ಪತ್ರಿಕೆಯಾಗಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಪರಾಮರ್ಶನ ಸಾಧನವಾಗಿ ಈ ಪತ್ರಿಕೆಯನ್ನು ಬಳಸುವಂತೆ ಪ್ರಕಟಗೊಳಿಸುತ್ತಿದ್ದೇವೆ ಎಂದು ಹೇಳಿದರು. ವಿದ್ಯಾರ್ಥಿ, ಶಿಕ್ಷಕರು ಮತ್ತು ಸಿಬ್ಬಂದಿಗಳಲ್ಲಿ ಬೌದ್ಧಿಕ ಕೌಶಲ, ಸಮುದಾಯದ ಪ್ರಜ್ಞೆಯನ್ನು ಉತ್ತೇಜಿಸಲು ಪ್ರಬಲ ಸಾಧನವಾಗಿ ವಾಯ್ಸ್ ಆಫ್ ವೈಬ್ರೆಂಟ್ ಪತ್ರಿಕೆಯು ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಟ್ರಸ್ಟಿ ಡಾ. ಶರತ್ ಗೋರೆ ಅವರು ಮಾತನಾಡಿ, ವಿದ್ಯಾರ್ಥಿಗಳು ತಮಗೆ ಯಾವ ಕ್ಷೇತ್ರದಲ್ಲಿ ಅಭಿರುಚಿ ಇದೆಯೋ ಆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಉದ್ಯಮಿ ಕೆ. ಶ್ರೀಪತಿ ಭಟ್, ಪುತ್ತೂರಿನ ವಿವೇಕಾನಂದ ಕಾಲೇಜಿನ ನಿವೃತ ಪ್ರಾಂಶುಪಾಲ ಡಾ. ಮಾಧವ ಭಟ್, ಟ್ರಸ್ಟಿಗಳಾದ ಚಂದ್ರಶೇಖರ ರಾಜೇ ಅರಸ್ ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್, ಸುಭಾಷ್ ಝಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಕಾಯ೯ಕ್ರಮ ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕರಾದ ವಿಕಾಸ್ ಹೆಬ್ಬಾರ್ ಸ್ವಾಗತಿಸಿ, ಅರುಣ್ ಕುಮಾರ್ ಪಿ. ವಂದಿಸಿದರು.


















