ಮೀಸಲಾತಿ ಪಟ್ಟಿಯಲ್ಲಿ ಅನ್ಯಾಯ : ಮೊಗೇರ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ
ಕರ್ನಾಟಕ ರಾಜ್ಯ ಸರಕಾರವು ಇತ್ತೀಚೆಗೆ ಹೊರಡಿಸಿರುವ ಪರಿಶಿಷ್ಟ ಜಾತಿಗಳ ಮೀಸಲಾತಿ ಪಟ್ಟಯಲ್ಲಿ ಕರ್ನಾಟಕ ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುವ ಮೊಗೇರ ಜಾತಿ ಸೇರಿದಂತೆ 89 ಉಪಜಾತಿಗಳಿಗೆ ಕೇವಲ 1 ಶೇಕಡಾ ಮೀಸಲಾತಿಯನ್ನು ಪ್ರಕಟಿಸಿ ವಂಚನೆ ಮಾಡಿರುವ ಸರಕಾರದ ಧೋರಣೆಯನ್ನು ಖಂಡಿಸಿ, ಮೊಗೇರ, ಸಮಾಜವು ರಾಜ್ಯದಾದ್ಯಂತ ತೀವ್ರ ಹೋರಾಟವನ್ನು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಸ್ಥಾಪಕಾಧ್ಯಕ್ಷರು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ ಮೇರ ತಿಳಿಸಿದ್ದಾರೆ.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ದ.ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಕಾಸರಗೋಡು, ಬೆಂಗಳೂರು ಭಾಗಗಳಲ್ಲಿ ಸುಮಾರು 5 ಲಕ್ಷದಷ್ಟು ಜಾತಿಯ ಜನರು ವಾಸಿಸುತ್ತಿದ್ದಾರೆ. ಮೂಲತಃ ಕೃಷಿ ಕೂಲಿ ಕಾರ್ಮಿಕರಾಗಿ ಗುರುತಿಸಿಕೊಂಡಿರುವ ಈ ಜನಾಂಗವು ತಮ್ಮ ಕುಲ ದೈವ ಬ್ರಹ್ಮ ಮೊಗೇರಿ ಮಹಾಂಕಾಳಿ ದೈವದ ಆರಾಧಕರಾಗಿರುತ್ತಾರೆ. ಈ ಹಿಂದೆ ಇದ್ದ ಮೀಸಲಾತಿಯ ಶೇ 15ರ ಅನುಪಾತದಲ್ಲಿ ಸೌಲಭ್ಯಗಳು ದೊರಕಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದುವರಿಯಲು ಸ್ವಲ್ಪ ಮಟ್ಟಿನ ಪ್ರಯೋಜನವನ್ನು ಪಡೆಯುತ್ತಿದ್ದರು, ಆದರೆ ಇತ್ತೀಚೆಗೆ ರಾಜ್ಯ ಸರಕಾರವು ಹೊರಡಿಸಿರುವ ಪರಿಶಿಷ್ಟರ ಮೀಸಲಾತಿ ಪಟ್ಟಿಯನ್ನು 4 ಭಾಗಗಳಾಗಿ ವರ್ಗೀಕರಿಸಲಾಗಿದೆ. 4ನೇ ಗುಂಪಿನಲ್ಲಿ ಒಟ್ಟು 89 ಜಾತಿಗಳನ್ನು ಸೇರಿಸಿ ಈ ಜಾತಿಗಳಗೆ ಕೇವಲ 1 ಶೇಕಡ ಮಾತ್ರ ಮೀಸಲಾತಿಯನ್ನು ನೀಡಲಾಗಿದೆ. 89 ಜಾತಿಗಳಿರುವ ಗುಂಪಿಗೆ 1 ಶೇಕಡಾ ಮೀಸಲಾತಿಯ ಕಿಂಚಿತ್ತು ಪ್ರಯೋಜನವೂ ಲಭಿಸದೆ ಎಲ್ಲಾ 89 ಜಾತಿಗಳು ಮೀಸಲಾತಿ ಸೌಲಭ್ಯದಿಂದ ಸಂಪೂರ್ಣವಾಗಿ ವಂಚಿತರಾಗಲಿದ್ದಾರೆ. ಮಾತ್ರವಲ್ಲದೇ ಮೀಸಲಾತಿಯೆಂಬ ಪರಿಕಲ್ಪನೆಯೇ ಈ ಜಾತಿಗಳಗೆ ಅನ್ವಯಿಸದೇ ಮತ್ತೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲ ದೂರ ಉಳಿದು ಸಾಮಾಜಿಕವಾಗಿ ಹಿಂದುಳಿಯಲು ಕಾರಣವಾಗಬಹುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಸೀತಾರಾಮ್ ಕೊಂಚಾಡಿ, ದಲಿತ ಮುಖಂಡರಾದ ಆಶೋಕ್ ಕೊಂಚಾಡಿ, ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ತುಳಸೀದಾಸ್, ಕೂಳೂರು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ತಾಲೂಕು ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಯಪ್ಪ ಎಸ್, ಉಪಾಧ್ಯಕ್ಷರಾದ ಸದಾನಂದ ಉಳ್ಳಾಲ್, ತಾಲೂಕು ಸಂಘದ ಉಪಾಧ್ಯಕ್ಷ ರಾಮ ಕೊಳಂಬೆ, ಮೋಹನ್‍ದಾಸ್ ಸುಳ್ಯ ಹಾಗೂ ತಾಲೂಕು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಪ್ಪ ಬೋಂದೆಲ್, ಮುಂತಾದವರು ಉಪಸ್ಥಿತರಿದ್ದರು.