ಮೂಡುಬಿದಿರೆ: ಚಿನ್ನ ಕದ್ದ ಆರೋಪಿಯ ಬಂಧನ
ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ ಕಚೇರಿ ಸಮೀಪದ ಮನೆಯಲ್ಲಿದ್ದ ಚಿನ್ನ ಮತ್ತು ಮೊಬೈಲನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ರಾಯಿ ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಬಾಗಲಕೋಟೆ ಮೂಲದ ನಿವಾಸಿಗಳು ವಾಸವಿದ್ದ ಮನೆಗೆ ಹಾಡು ಹಗಲೇ ನುಗ್ಗಿದ ಆರೋಪಿ ಮನೆಯಲ್ಲಿದ್ದ ಚಿನ್ನದ ಸರ ಮೊಬೈಲ್ ಸೇರಿದಂತೆ ರೂ 50 ಸಾವಿರ ಮೌಲ್ಯದ ಸ್ವತ್ತು ಕಳವು ಮಾಡಿದ್ದ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಘಟನೆ ನಡೆದ ಮನೆ ಹತ್ತಿರದ ಸಿಸಿ ಕೆಮರಾವನ್ನು ಪೊಲೀಸರು ಪರಿಶೀಲಿಸಿ ಆರೋಪಿಯ ಮಾಹಿತಿ ಸಂಗ್ರಹಿಸಿ ನಂತರ ದಸ್ತಗಿರಿ ಮಾಡಿದರು. ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ದಾರ್ಥ ಗೊಯಲ್ (ಕಾ&ಸು), ದಿನೇಶ್ ಕುಮಾರ್ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ನಿರ್ದೇಶನದಂತೆ ಈ ಕಾರ್ಯಚರಣೆ ನಡೆಸಿದ್ದು ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಉಪ ನಿರೀಕ್ಷಕರಾದ ದಿವಾಕರ್ ರೈ, ಸಿದ್ದಪ್ಪ ನರನೂರು, ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೊಹಮ್ಮದ್ ಇಕ್ಬಾಲ್, ನಾಗರಾಜ್ ಲಮಾಣಿ, ಅಕೀಲ್ ಅಹಮ್ಮದ್, ಚಂದ್ರಹಾಸ ರೈ ಮತ್ತು ವೆಂಕಟೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.