ಮೂಡುಬಿದಿರೆ: ಆಳ್ವಾಸ್ ವಿರಾಸ್-2023ರ ಮಾಧ್ಯಮ ಕೇಂದ್ರ ಉದ್ಘಾಟನೆ

ಮೂಡುಬಿದಿರೆ : ಡಿ.14.ರಿಂದ 17ರ ವರೆಗೆ ನಡೆಯುವ ‘ಆಳ್ವಾಸ್‌ವಿರಾಸತ್-23’ರ ಮಾಧ್ಯಮ ಕೇಂದ್ರವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ವಿರಾಸತ್ ನ ರೂವಾರಿ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಣ್ಣಮಟ್ಟದಿಂದ ಆರಂಭಗೊಂಡ ಆಳ್ವಾಸ್ ವಿರಾಸತ್ ಇಂದು ಲೋಕ ಪ್ರಸಿದ್ಧವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ಹೊಂದಿದೆ. ವಿರಾಸತ್ ಯಶಸ್ಸಿನಲ್ಲಿ ಮಾಧ್ಯಮದ ಪಾತ್ರ ಮಹತ್ತರವಾದುದು ಎಂದರು.
ವನ್ಯಜೀವ ಛಾಯಾಗ್ರಾಹಕ, ನಿವೃತ್ತ ಐಎಫ್‌ಎಸ್ ಅಧಿಕಾರಿ ಎಂ.ಎನ್. ಜಯಕುಮಾರ್ ಮಾತನಾಡಿ, ಮಾಧ್ಯಮಗಳ ಮೂಲಕ ಜನರಿಗೆ ಒಳ್ಳೆ ಸಂದೇಶ ತಲುಪಲಿ ಎಂದರು. ಪ್ರತಿಭೆಗಳಿಗೆ ಸಾಂಸ್ಕೃತಿಕ ವೇದಿಕೆಗಳು ಅವಶ್ಯ. ಎಲ್ಲಾ ಪ್ರತಿಭೆಗಳಿಗೂ ಇಲ್ಲಿ ಅವಕಾಶವನ್ನು ನೀಡಲಾಗುತ್ತದೆ ಎಂದರು.

ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ದೇಶ ಮಾತ್ರವಲ್ಲದೆ ಹೊರ ದೇಶದ ವರೆಗೂ ತಲುಪಿಸುವ ಕಾರ್ಯ ನಡೆಯುತ್ತಿದೆ ವಿರಾಸತ್‌ನಲ್ಲಿ; ಪತ್ರಕರ್ತರು ಕೇವಲ ವರದಿ ಮಾತ್ರವಲ್ಲದೆ, ಈ ವಿರಾಸತ್ ಉತ್ಸವವನ್ನು ಆಸ್ವಾದಿಸಬೇಕು ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್, ಖಜಾಂಚಿ ಪುಷ್ಪರಾಜ್, ಸದಸ್ಯರು, ಮೂಡುಬಿದಿರೆ ತಾ.ಸಂಘದ ಅಧ್ಯಕ್ಷ ಯಶೋಧರ ವಿ.ಬಂಗೇರಾ, ಕಾರ್ಯದರ್ಶಿ ಪ್ರೇಮಾಶ್ರೀ ಕಲ್ಲಬೆಟ್ಟು, ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಇದ್ದರು. ಅವಿನಾಶ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.