ಕಾಲು ಸೇತುವೆ ನಿರ್ಮಿಸಿ ಹಳ್ಳಿ ಮನಸ್ಸುಗಳನ್ನು ಬೆಸೆದ ಯುವ ತೇಜಸ್ಸು ತಂಡ
ಸುಳ್ಯ ತಾಲೂಕಿನ ನಾರ್ಣಕಜೆಯ “ಯುವ ತೇಜಸ್ಸು” ಯುವಕರ ತಂಡವೊಂದು ಸುಮಾರು 20ಕ್ಕೂ ಹೆಚ್ಚು ಮನೆಗಳ ಸಂಪರ್ಕಿಸಬೇಕಾದ ರಸ್ತೆಯಲ್ಲಿ ಕಬ್ಬಿಣದ ಶಾಶ್ವತ ಕಾಲುಸಂಕ ನಿರ್ಮಿಸಿಕೊಡುವುದರ ಮೂಲಕ ಆ ಹಳ್ಳಿ ಜನರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ನಾರ್ಣಕಜೆಯಿಂದ ಪೈಲಾರು ಕಡೆ ಸಂಪರ್ಕಿಸಬಹುದಾದ ರಸ್ತೆಯಲ್ಲಿ ಅಡ್ಡಲಾಗಿ ಹೊಳೆ ಹರಿದು ಹೋಗುವ ಕಾರಣ ಈ ಭಾಗದ ಜನ ಮಳೆಗಾಲದಲ್ಲಿ ಮರದ ಕಾಲುಸಂಕ ಅಥವಾ ಸುತ್ತು ಬಳಸಿ ಕಿಲೋಮೀಟರ್ ಗಟ್ಟಲೆ ನಡೆದು ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಮಾಡಿರುವ ಯುವ ತೇಜಸ್ಸು ಯುವಕರ ಬಳಗವೂ ಸುಮಾರು ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿ ವೆಚ್ಚದಲ್ಲಿ ಕಬ್ಬಿಣದ ಕಾಲಸಂಕ ಸಿದ್ದಪಡಿಸಿ ಈ ಭಾಗದಲ್ಲಿ ಅಳವಡಿಸಿ ಇಲ್ಲಿನ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಸುಮೂರು ಮೂವತ್ತಕ್ಕೂ ಹೆಚ್ಚು ಸಮಾನ ಮನಸ್ಕ ಯುವಕರು ಕಬ್ಬಿಣದ ಕಾಲು ಸಂಕ ನಿರ್ಮಾಣದ ಕಾರ್ಯದಲ್ಲಿ ತಮ್ಮ ಶ್ರಮ ಸೇವೆಯನ್ನು ಸಲ್ಲಿಸಿದ್ದಾರೆ. ಈ ಮೂಲಕ ಜಿಲ್ಲೆಯ ಯುವಕರಿಗೆ ಮಾದರಿಯಾಗುವುದರ ಜೊತೆಗೆ ಸರಕಾರದಿಂದ ನಡೆಯಬೇಕಾಗಿದ್ದ ಅಭಿವೃದ್ದಿ ಕಾರ್ಯಗಳನ್ನು ತಾವೇ ಸ್ವತಃ ಸೇವಾ ರೂಪದಲ್ಲಿ ಮಾಡಿ ಕೊಡುವುದರ ಮೂಲಕ ಗಮನ ಸೆಳೆದಿರುತ್ತಾರೆ. ಕಳೆದ ಆರು ತಿಂಗಳ ಹಿಂದೆ ಯುವ ತೇಜಸ್ಸು ತಂಡ ಬೆಳ್ತಂಗಡಿಯಲ್ಲೂ ಕಾಲು ಸೇತುವೆ ನಿರ್ಮಿಸಿ ಆ ಭಾಗದಲ್ಲಿ ಜನರ ಭಾಂದವ್ಯ ಬೆಸೆಯುವ ಕೆಲಸವನ್ನೂ ಮಾಡಿದ್ದರು.