ಮಂಗಳೂರು ವಿವಿ ಅಂತರ ಕಾಲೇಜು ಸಾಂಸ್ಕøತಿಕ ವೈವಿಧ್ಯ ಸ್ಪರ್ಧೆ “ಧವಲಾ ಸಿರಿ-2023”

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಮಹಾವಿದ್ಯಾಲಯ ಹಾಗೂ ಲಲಿತಸಂಘ ಇದರ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಂಸ್ಕ್ರತಿಕ ವೈವಿಧ್ಯ ಸ್ಪರ್ಧೆ “ಧವಲಾ ಸಿರಿ-2023” ನ್ನು ಶಾಸಕ ಉಮಾನಾಥ್ ಎ ಕೋಟ್ಯಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮಲ್ಲಿರುವ ಸಾಮರ್ಥ್ಯವನ್ನು ಇನ್ನೂ ಉತ್ತಮ ಪಡಿಸಲು ಇರುವಂತಹ ಅವಕಾಶವೇ ಸ್ಪರ್ಧೆ. ಕೇವಲ ಸ್ಪರ್ಧಿಸಿ ಬಹುಮಾನ ಪಡೆಯುವುದೊಂದೇ ಸ್ಪರ್ಧೆಗಳ ಉದ್ದೇಶವಾಗಿರಬಾರದು ಎಂದ ಅವರು ವಿದ್ಯಾರ್ಜನೆಯ ಜೊತೆಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸುವಂತಹ ಈ ಸಾಂಸ್ಕೃತಿಕ ಕಾರ್ಯಕ್ರಮವೇ ಧವಲಾ ಸಿರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳು ಚಲನಚಿತ್ರ ಹಾಗೂ ರಂಗಭೂಮಿಯ ಹಾಸ್ಯಕಲಾವಿದ ಅರವಿಂದ್ ಬೋಳಾರ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬೋಳಾರ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಯ ಪ್ರಜ್ಞೆ ಅನ್ನುವುದು ಇರಬೇಕು. ಸಮಯಪ್ರಜ್ಞೆ ಇರುವವನನ್ನು ಸಮಯವೇ ಕಾಪಾಡುತ್ತದೆಂಬುದು ಸತ್ಯ. ಮಕ್ಕಳು ತಮ್ಮ ತಂದೆ-ತಾಯಿ, ಗುರುಗಳು ಯಾರಿಗಾಗಿ ಕಷ್ಟಪಡುತ್ತಾರೆಂಬುದನ್ನು ತಲೆಯಲ್ಲಿಟ್ಟುಕೊಂಡು ಅರ್ಥೈಸಿಕೊಂಡರೆ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಮಹಾವೀರ ಅಜ್ರಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಅಭಿಜಿತ್ ಎಂ., ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕಿರುತೆರೆ ನಟ ಶ್ರೀನಿಧಿ ಭಟ್, ನಿಕಟ ಪೂರ್ವ ಪ್ರಾಚಾರ್ಯ ಸುದರ್ಶನ್ ಕುಮಾರ್, ದಿನೇಶ್, ವಿದ್ಯಾರ್ಥಿ ಸಂಘದ ನಾಯಕ ನಿಖಿತ್ , ಲಲಿತಾ ಕಲಾ ಸಂಘದ ಕಾರ್ಯದರ್ಶಿ ಶ್ರವಣ್ ಕುಮಾರ್, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.